ಕಲಬುರಗಿ: ಕೊರೊನಾ ವೈರಸ್ ತಡೆಗಟ್ಟುವ ಮತ್ತು ಜನಸಂದಣಿ ನಿಯಂತ್ರಣದಲ್ಲಿಡಲು ಈಗಾಗಲೇ ಕಲಬುರಗಿ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು 2020ರ ಏಪ್ರಿಲ್ 30ರವರೆಗೆ ವಿಸ್ತರಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಇಂದು ಆದೇಶ ಹೊರಡಿಸಿದ್ದಾರೆ.
ಕಲಬುರಗಿಯಲ್ಲಿ ಏ. 30ರ ವರೆಗೆ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಕೊರೊನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ 2020ರ ಮಾರ್ಚ್ 19ರ ರಾತ್ರಿ 8 ಗಂಟೆಯಿಂದ ಏಪ್ರಿಲ್ 14ರ ರಾತ್ರಿ 8 ಗಂಟೆಯವರೆಗೆ ಒಟ್ಟು 26 ದಿನಗಳವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಈಗ ಪರಿಸ್ಥಿತಿಯ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿಗಳು 2020ರ ಏಪ್ರಿಲ್ 30ರವರೆಗೆ ನಿಷೇಧಾಜ್ಞೆ ವಿಸ್ತರಿಸಿದ್ದಾರೆ. ನಿಷೇಧಾಜ್ಞೆಯ ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಧಾರ್ಮಿಕ ಮತ್ತು ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಗುಂಪು-ಗುಂಪಾಗಿ ಮತ್ತು ಅನಾವಶ್ಯಕವಾಗಿ ಸಂಚರಿಸುವಂತಿಲ್ಲ ಎಂದು ತಿಳಿಸಿದ್ದಾರೆ.ಅಲ್ಲದೇ ಈ ಆದೇಶ ಅಗತ್ಯ ಸೇವೆಗಳಿಗೆ ಅನ್ವಯವಾಗುವುದಿಲ್ಲ. ಈ ಆದೇಶದಿಂದ ಭಯ ಪಟ್ಟು ಅಗತ್ಯಕ್ಕಿಂತ ಹೆಚ್ಚು ಅವಶ್ಯ ದಾಸ್ತಾನುಗಳನ್ನು ಸಹ ಖರೀದಿಸುವ ಅಗತ್ಯವಿಲ್ಲ ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.