ಕಲಬುರಗಿ: ಗಣೇಶ ಹಬ್ಬ ಬಂದರೆ ಸಾಕು ಯುವಕರಲ್ಲಿ ಎಲ್ಲಿಲ್ಲದ ಸಂಭ್ರಮವೊ ಸಂಭ್ರಮ. ಶ್ರದ್ದಾ ಭಕ್ತಿಯ ಜೊತೆಗೆ ಬಣ್ಣ ಬಣ್ಣದ ಬೃಹದಾಕಾರದ ಗಣಪತಿಯ ಮೂರ್ತಿಯನ್ನು ಕಾಂಪಿಟೇಶನ್ ಮೇಲೆ ಪ್ರತಿಷ್ಠಾಪಿಸುವವರೇ ಹೆಚ್ಚು. ಆದರೆ, ಕಲಬುರ್ಗಿಯಲ್ಲೊಂದು ಯುವಕರ ತಂಡವಿದೆ. ಆ ಯುವ ಪಡೆ ಸ್ವತಃ ತಾವೇ ಮಣ್ಣಿನ ಗಣಪತಿಯನ್ನು ತಯಾರಿಸುವ ಮೂಲಕ ವಿಶೇಷವಾಗಿ ಗಣೇಶ ಹಬ್ಬವನ್ನು ಆಚರಿಸುತ್ತಾರೆ.
ಕಲಬುರಗಿ ನಗರದ ಶಹಬಜಾರ್ ಬಡಾವಣೆಯಲ್ಲಿ ಶ್ರೀರಾಮ ತರುಣ ಸಂಘದ ಯುವಕರು ವಿಶೇಷವಾಗಿ ಗಣೇಶ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದ ಆರು ವರ್ಷದಿಂದ ನಗರದ ಶ್ರೀರಾಮ ಮಂದಿರದಲ್ಲಿ ತಾವೇ ಮಣ್ಣಿನ ಗಣಪತಿಯನ್ನು ನಿರ್ಮಿಸುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸುತ್ತಿದ್ದಾರೆ.
ಈ ವರ್ಷವೂ ಸಹ ತಾವೇ ಜೇಡಿ ಮಣ್ಣಿನಿಂದ ಸುಂದರವಾದ 9 ಅಡಿ ಎತ್ತರದ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಿದ್ದಾರೆ. ಜೇಡಿಮಣ್ಣನ್ನು ತಂದು ತಾವೇ 15 ದಿನಗಳ ಕಾಲ ಪರಿಶ್ರಮ ಪಟ್ಟು ಅಂದವಾದಂತಹ ಗಣೇಶನ ಮೂರ್ತಿಯನ್ನು ತಯಾರಿಸುವ ಮೂಲಕ ಕಲಾವಿದರಿಗೆ ಸೆಡ್ಡುಹೊಡೆದು ಗಮನ ಸೆಳೆದಿದ್ದಾರೆ.
ಎತ್ತಿನ ಚಕ್ಕಡಿಯಲ್ಲಿ ಮೆರವಣಿಗೆ: ಶ್ರೀರಾಮ ಗಣೇಶ ಮಂಡಳಿ ಯುವಕರು ಕೇವಲ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸುವುದಷ್ಟೇ ಅಲ್ಲದೆ. ವಿದೇಶಿ ಪ್ಯಾಷನ್ಗೆ ಜೋತು ಬೀಳದೇ ಪಕ್ಕಾ ಹಳ್ಳಿ ಸೊಗಡಿನಲ್ಲಿ ತಾವು ತಯಾರಿಸಿದ ಒಂಬತ್ತು ಅಡಿ ಗಣೇಶನ ಮೂರ್ತಿಯನ್ನು ಎತ್ತಿನ ಚಕ್ಕಡಿಯಲ್ಲಿ ಭವ್ಯವಾಗಿ ಮೆರವಣಿಗೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದ್ದಾರೆ.
ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಸ್ವತಃ ತಯಾರಿಸುವ ಮೂಲಕ ನಾವು ಪ್ರತಿ ವರ್ಷವೂ ಗಣೇಶ ಉತ್ಸವವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಿಕೊಂಡು ಬಂದಿದ್ದೇವೆ. ನಮ್ಮ ಕ್ಷತ್ರಿಯ ಸಮುದಾಯದ ಯುವಕರಿಂದ ಪ್ರತಿ ವರ್ಷವೂ ಡಿಫ್ರೆಂಟ್ ಆಗಿರುವಂತಹ ಗಣೇಶನ ಮೂರ್ತಿಯನ್ನು ಅನಾವರಣಗೊಳಿಸಲಾಗುತ್ತದೆ.
ಈ ಬಾರಿ ಓಂ ಮೇಲೆ ಕುಳಿತ 9 ಅಡಿ ಮಣ್ಣಿನ ಗಣಪತಿ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಲಾಗಿತ್ತು. ಅಷ್ಟೇ ಅಲ್ಲ ನಮ್ಮ ಸ್ವದೇಶಿ ಸಂಪ್ರದಾಯದಂತೆ ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಸಂಪ್ರದಾಯದಂತೆ ಎತ್ತಿನ ಬಂಡಿಯಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ಮಾಡುವ ಮೂಲಕ ನಿಮಜ್ಜನ ಮಾಡಲಾಗುತ್ತೆ.
ಇದು ನಾವು ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತಹ ಪದ್ಧತಿ. ನಮ್ಮ ಉದ್ದೇಶ ಇಷ್ಟೇ. ಗಣೇಶ ಉತ್ಸವದ ಹೆಸರಿನಲ್ಲಿ ಪರಿಸರವನ್ನ ಹಾನಿ ಮಾಡದೇ ಪರಿಸರ ಸಂರಕ್ಷಣೆಯ ಗಣೇಶ ಉತ್ಸವವನ್ನು ಆಚರಿಸಬಹುದಾಗಿದೆ ಎನ್ನುತಾರೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಚವ್ಹಾಣ್.
ಅದೇನೇ ಇರಲಿ ಪ್ಲಾಸ್ಟರ್ ಪ್ಯಾರಿಸ್ ಗಣಪತಿಯ ಮೊರೆ ಹೋಗದೇ ಸ್ವದೇಶಿ ಮಣ್ಣಿನಿಂದ ಸುಂದರವಾದ ಬೃಹತಾಕಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೆರೆಯುವುದರ ಜೊತೆಗೆ ಈ ಯುವಕರು ಹಳ್ಳಿ ಸೊಗಡಿನೊಂದಿಗೆ ಗಣೇಶ ಉತ್ಸವವನ್ನು ಸಂಭ್ರಮಿಸಿರುವುದು ನಿಜಕ್ಕೂ ವಿಶೇಷವಾಗಿತ್ತು.
ಓದಿ: 3ನೇ ಬಾರಿ ಮುಂದೂಡಲ್ಪಟ್ಟ ಬಿಜೆಪಿ ಜನೋತ್ಸವ: ವಿಘ್ನ ನಿವಾರಣೆಗೆ ವೇದಿಕೆ ಮೇಲೆ ಗಣಹೋಮ