ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣವು ಪೊಲೀಸರ ಕೊರಳಿಗೇ ಉರುಳಾಗಿದ್ದು, ರಾಯಚೂರು ಜಿಲ್ಲೆ ಲಿಂಗಸೂಗೂರು ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಅವರ ಬಂಧನವಾಗಿದೆ.
ನಿನ್ನೆಯಿಂದ ಸುದೀರ್ಘವಾಗಿ ತೀವ್ರ ವಿಚಾರಣೆ ನಡೆಸಿದ ಸಿಐಡಿ ತಂಡ ಇಂದು ಇಬ್ಬರೂ ಅಧಿಕಾರಿಗಳನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದೆ. ಮಲ್ಲಿಕಾರ್ಜುನ ಸಾಲಿ ಈ ಹಿಂದೆ ಆಳಂದ ಉಪ ವಿಭಾಗದ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದರು. ಅಕ್ರಮದಲ್ಲಿ ಸಾಲಿ ಅವರ ಪಾತ್ರದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಹಗರಣ ಸಿಬಿಐಗೆ ಒಪ್ಪಿಸಲು ಸತೀಶ್ ಜಾರಕಿಹೊಳಿ ಆಗ್ರಹ
ಸದ್ಯ ಡಿವೈಎಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಸಿಪಿಐ ಆನಂದ್ ಮೇತ್ರೆ ವಶಕ್ಕೆ ಪಡೆದಿರುವ ಸಿಐಡಿ, ವೈದ್ಯಕೀಯ ತಪಾಸಣೆ ನಂತರ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡಲು ಸಿಐಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ನಿರೀಕ್ಷೆ ಇದೆ.