ಕಲಬುರಗಿ: ತಾಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವೀರ ಸಂಸ್ಥಾನ ಮಠದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಚಿನ್ನದ ಕಂತಿ ಪ್ರಶಸ್ತಿಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎಸ್.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರಡಗಿ ಶ್ರೀ ರೇವಣಸಿದ್ಧ ಶಿವಾಚಾರ್ಯ, ಸಮಾಜ ಸೇವೆ ಪರಿಗಣಿಸಿ ಪ್ರತಿವರ್ಷ ಕೊಡಮಾಡುವ ಚಿನ್ನದ ಕಂತಿ ಪ್ರಶಸ್ತಿಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎಸ್.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಚಿಕ್ಕವೀರ ರೇವಣಸಿದ್ದೇಶ್ವರ ಪುಣ್ಯಸ್ಮರಣೆಯ ಸ್ಮರಣಾರ್ಥವಾಗಿ ಪ್ರತಿ ವರ್ಷ ಚಿನ್ನದ ಕಂತಿ ಪ್ರಶಸ್ತಿ ಕೊಡಲಾಗುತ್ತದೆ. ಡಾ.ಮಂಜುನಾಥ್ ಅವರ ವೈದ್ಯಕೀಯ ಕ್ಷೇತ್ರದ ಸಾಧನೆ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ.ಮಂಜುನಾಥ್ ಅವರು ಕೇವಲ ಬೆಂಗಳೂರು, ಕಲಬುರಗಿ ಮಾತ್ರವಲ್ಲದೆ ರಾಜ್ಯಾದ್ಯಂತ ಸಂಚರಿಸಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳತಿದ್ದ ಅನೇಕ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ತಿಳಿಸಿದರು.