ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಹೆಚ್ಕೆಇ)ಗೆ ನಡೆದ ಚುನಾವಣೆಯ ಫಲಿತಾಂಶ ಭಾನುವಾರ ತಡ ರಾತ್ರಿ ಹೊರ ಬಿದ್ದಿದೆ.
ಹೆಚ್ಕೆಇ ಸಂಸ್ಥೆಗೆ 2ನೇ ಅವಧಿಗೆ ಭೀಮಾಶಂಕರ ಬಿಲಗುಂದಿ ಪುನರ್ ಆಯ್ಕೆಯಾಗಿದ್ದಾರೆ. ಒಟ್ಟು 1,575 ಮತದಾರರನ್ನು ಹೊಂದಿದ್ದ ಹೆಚ್ಕೆಇ ಸಂಸ್ಥೆಯ ಚುನಾವಣೆಯಲ್ಲಿ 1,465 ಸದಸ್ಯರು ಮತದಾನ ಮಾಡಿದ್ದರು. ಬೆಳಗ್ಗೆ 11 ಗಂಟೆಗೆ ಆರಂಭವಾದ ಮತ ಏಣಿಕೆ ಕಾರ್ಯ ರಾತ್ರಿ 11.05ಕ್ಕೆ ಪೂರ್ಣಗೊಂಡಿದೆ.
ಭೀಮಾಶಂಕರ ಬಿಲಗುಂದಿ, ಬಸವರಾಜ್ ಭೀಮಳ್ಳಿ ಮತ್ತು ಶಶೀಲ್ ನಮೋಶಿ ಪ್ಯಾನೆಲ್ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿತ್ತು. ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಭೀಮಾಶಂಕರ ಬಿಲಗುಂದಿ ಅವರು 620 ಮತಗಳನ್ನು ಪಡೆದು ಪ್ರತಿಸ್ಪರ್ಧಿಯಿಂದ 143 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೂವರಲ್ಲಿ ಡಾ. ಶರಣಪ್ಪ ಹರವಾಳ ಗೆಲುವು ಸಾಧಿಸಿದ್ದಾರೆ. ಇನ್ನು, 13 ಕಾರ್ಯಕಾರಿಣಿ ಸದಸ್ಯರ ಸ್ಥಾನಕ್ಕೂ ನಡೆದ ಚುನಾವಣೆಯಲ್ಲಿ 43 ಜನ ಸ್ಪರ್ಧಿಸಿದ್ದು, ಅದರಲ್ಲಿ ಮಹಾದೇವಪ್ಪ ರಾಂಪುರೆ, ಮಂಠಾಳೆ, ಅರುಣ್ ಪಾಟೀಲ್, ವಿನಯ್ ಪಾಟೀಲ್, ಸಾಯಿ ಎನ್. ಪಾಟೀಲ್, ಗಿರಿಜಾ ಶಂಕರ್, ರಜನೀಶ್ ವಾಲಿ, ಕಾಮರೆಡ್ಡಿ, ಕೈಲಾಶ್ ಪಾಟೀಲ್, ಸೋಮ್ ನಿಗ್ಗುಡಗಿ, ಬಿ. ಖಂಡೇರಾವ್, ಬಿಜಾಪುರ್ ಮತ್ತು ಅನಿಲ್ ಪಟ್ಟಣ್ ಆಯ್ಕೆಯಾಗಿದ್ದಾರೆ.