ಕಲಬುರಗಿ/ಸೇಡಂ: ಇತ್ತ ಎಲ್ಲಾ ಇಲಾಖೆಗಳು ಮಹಾಮಾರಿ ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದರೆ, ಅತ್ತ ಮರಳುಗಳ್ಳರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದಾರೆ. ಬೆಳಗ್ಗೆಯಿಂದ ಮರಳು ಸಂಗ್ರಹಿಸಿ ರಾತ್ರಿಯಾಗುತ್ತಿದ್ದಂತೆ ಮರಳನ್ನು ಅಲ್ಲಿಂದ ಸಾಗಿಸಲಾಗ್ತಿದೆ.
ತಾಲೂಕಿನ ಮಳಖೇಡದ ಕಾಗಿಣಾ ನದಿಯಲ್ಲಿ ಪ್ರತಿನಿತ್ಯ ಸುಮಾರು 20ರಿಂದ 30 ಟ್ರ್ಯಾಕ್ಟರ್ ಮರಳು ತೆಗೆದು ಸಾಗಾಟ ಮಾಡಲಾಗುತ್ತಿದೆ. ಇನ್ನು ಇದಕ್ಕೆ ತೇಲ್ಕೂರ, ಹಾಬಾಳ, ಕುರಕುಂಟಾ, ಕುಕ್ಕುಂದಾ ಹಾಗೂ ಮುಧೋಳ ಗ್ರಾಮಗಳೂ ಹೊರತಾಗಿಲ್ಲ ಎನ್ನಲಾಗಿದೆ.
ಸರ್ಕಾರ ಅಕ್ರಮ ಮರಳುಗಾರಿಕೆ ಮೇಲೆ ನಿರ್ಬಂಧ ಹೇರಿದೆ. ಜೊತೆಗೆ ಟ್ರ್ಯಾಕ್ಟರ್ಗಳಲ್ಲಿ ಮರಳು ಸಾಗಿಸುವುದನ್ನು ತಡೆ ಹಿಡಿದಿದೆ. ಆದರೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಸರ್ಕಾರದ ಯಾವ ಆದೇಶವನ್ನೂ ಪಾಲಿಸುತ್ತಿಲ್ಲ. ಬದಲಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮರಳನ್ನು ಮರಳುಗಳ್ಳರು ಲೂಟಿ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದಾರೆ.
ಕೊರೊನಾ ಹೋಗಲಾಡಿಸಲು ಸಹಾಯಕ ಆಯುಕ್ತರು, ತಹಶೀಲ್ದಾರ ಮತ್ತು ಪೊಲೀಸ್ ಇಲಾಖೆ ನಿರಂತರ ಪರಿಶ್ರಮ ಪಡುತ್ತಿದ್ದರೆ, ಮರಳುಗಳ್ಳರಿಗೆ ಮತ್ತಷ್ಟು ದಾರಿ ಮಾಡಿಕೊಟ್ಟಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಅನೇಕರು ಅಕ್ರಮ ಮರಳು ದಂಧೆ ಆರಂಭಿಸಿದ್ದಾರೆ.
ಈ ಕುರಿತು ಮಾತನಾಡಿರುವ ತಹಶೀಲ್ದಾರ್ ಬಸವರಾಜ್ ಬೆಣ್ಣೆ ಶಿರೂರ, ಮರಳುಗಳ್ಳರ ಈ ನೀತಿ ಸರಿಯಲ್ಲ. ಈಗಾಗಲೇ ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ತರಲಾಗಿದೆ. ಮುಂದೆ ಅವರೇ ಅದರ ಬಗ್ಗೆ ನಿಗಾ ವಹಿಸಿ ಕ್ರಮ ಜರುಗಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.