ಕಲಬುರಗಿ: ಡಿ ಕೆ ಶಿವಕುಮಾರ್ ನನ್ನ ಮಿತ್ರನಲ್ಲ. ಅವರ ಪಕ್ಷ ಬೇರೆ, ನಮ್ಮ ಪಕ್ಷವೇ ಬೇರೆ. ಅವರು ಒಂದು ಪಕ್ಷದ ಅಧ್ಯಕ್ಷ ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರಾಗಿ ಟಿವಿ ಮುಂದೆ ಪದಗ್ರಹಣ ಮಾಡುತ್ತಿದ್ದಾರೆ. ಜನರ ಮುಂದೆ ಅಧಿಕಾರ ಸ್ವೀಕಾರ ಮಾಡುತ್ತಿಲ್ಲ. ಈಗ ಅವರು ಹತ್ತು ಲಕ್ಷ ಜನರ ಮುಂದೆ ಅಧಿಕಾರ ಸ್ವೀಕಾರ ಅಂದರೂ ಸುಮ್ಮನಿರಬೇಕು. 20 ಲಕ್ಷ ಅಂದ್ರುನೂ ಸುಮ್ಮನಿರಬೇಕು. ಇದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಡಿ ಕೆ ಶಿವಕುಮಾರ್ ಶಕ್ತಿ ಏನಿದೆ ಅನ್ನೋದು ನನಗೆ ಗೊತ್ತಿದೆ ಎಂದು ಪರೋಕ್ಷವಾಗಿ ಕಾಲೆಳೆದರು.
ಚಿಕ್ಕಮಂಗಳೂರಿನಲ್ಲಿ ಕೆಲ ಬಿಜೆಪಿ ನಾಯಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ ಅವರು, ಆರ್.ಅಶೋಕ್ ಅವರ ಹುಟ್ಟುಹಬ್ಬದ ಹಿನ್ನೆಲೆ ಅಲ್ಲಿ ಕೆಲ ನಾಯಕರು ಸೇರಿದ್ದರು. ಅಷ್ಟಕ್ಕೆ ಭಿನ್ನಮತ ಅನ್ನೋದು ತಪ್ಪು. ನಮ್ಮ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲವೆಂದು ಸ್ಪಷ್ಟಪಡಿಸಿದರು.
ಸಿಎಂ ಆಗಿ ಯಡಿಯೂರಪ್ಪ ಅವರು ಮುಂದಿನ ಮೂರು ವರ್ಷ ಪೂರೈಸಲಿದ್ದಾರೆ. ಹೆಚ್ ವಿಶ್ವನಾಥ್ಗೆ ಬಿಜೆಪಿ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡಲಿದೆ. ದೇವರಾಣೆ ಮಾಡಿ ಹೇಳ್ತೀನಿ ನಾನು ಡಿಸಿಎಂ ಹುದ್ದೆ ಆಕಾಂಕ್ಷಿಯಲ್ಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.