ಕಲಬುರಗಿ: ರಾಜ್ಯದಲ್ಲಿ ದ್ವೇಷದ ರಾಜಕಾರಣ ಎಲ್ಲೆ ಮೀರಿದೆ. ಬಿಜೆಪಿಯಿಂದ ದ್ವೇಷ ರಾಜಕಾರಣ ನಡೆದಿದೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟಿಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ ಎಷ್ಟರಮಟ್ಟಿಗಿದೆ ಅನ್ನೋದು ಅರ್ಥವಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಡಿ.ಕೆ ಶಿವಕುಮಾರ್ ಕಲಬುರಗಿಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಶಾಸಕರಿಗೂ ನೋಟಿಸ್ ನೀಡಿಲ್ಲ, ಆದರೆ ನನಗೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ. ನನಗೆ ತೊಂದರೆ ಕೊಟ್ಟೋರು ಖುಷಿಯಾಗಿರಲಿ, ನನ್ನ ವಿರುದ್ಧ ಎಫ್ಐಆರ್ ಹಾಕೋ ಜೊತೆಗೆ ನೋಟಿಸ್ ಸಹ ನೀಡಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.
ರಾಜಕೀಯ ಕುಮ್ಮಕ್ಕು ಇಲ್ಲದಿದ್ದಲ್ಲಿ ಸಿಬಿಐ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಆದರೆ ನ್ಯಾಯ ಸಮ್ಮತ ತನಿಖೆ ನಡೆಸಲಿ. ನಾನು ಕಾನೂನಿಗೆ ಗೌರವಿಸುತ್ತೇವೆ ಎಂದರು.
ನಾನು ವಿಚಾರಣೆಗೆ ಹೋದಾಗ ಯಾರು ಆತಂಕ ಪಡಬಾರದು. ಕಾರ್ಯಕರ್ತರು ಶಾಂತವಾಗಿ ವರ್ತಿಸಿ, ನಾನು ಗೆದ್ದು ಬರುತ್ತೇನೆ ಅನ್ನೋ ವಿಶ್ವಾಸವಿದೆ. ಪಕ್ಷದ ಮುಖಂಡರು ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ ಎಂದು ಡಿಕೆಶಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರಿಗೆ ಮನವಿ ಮಾಡಿದರು.