ಕಲಬುರಗಿ: ಜಿಲ್ಲೆಯಲ್ಲಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಪೊಲೀಸ್ ಇಲಾಖೆ ಖಡಕ್ ಸಂದೇಶ ನೀಡುವುದರ ಜೊತೆಗೆ ಕಟ್ಟುನಿಟ್ಟಿನ ಕ್ರಮ ಸಹ ಕೈಗೊಂಡಿದ್ದಾರೆ. ಹೆಲ್ಮೆಟ್ ಧರಿಸದಿದ್ದವರಿಗೆ ದಂಡ ವಿಧಿಸುತ್ತಿದ್ದಾರೆ. ಹೆಲ್ಮೆಟ್ ಧರಿಸಿ ಕಾನೂನು ಗೌರವಿಸಿದವರಿಗೆ ಹೂವು ನೀಡಿ ಅಭಿನಂದಿಸಿದ್ದಾರೆ.
ಇಂದು ನಗರದ ಹಲವಡೆ ಟ್ರಾಫಿಕ್ ಪೊಲೀಸರು ದಂಡ ಇಲ್ಲವೆ ಹೂವು ಕಾರ್ಯಚರಣೆ ನಡೆಸಿದರು. ಇನ್ನು ಹೆಲ್ಮೆಟ್ ಕಡ್ಡಾಯ ನೀತಿ ಜಾರಿಗೆ ತರಲು ದೃಢ ನಿರ್ಧಾರ ಮಾಡಿದ ಪೊಲೀಸರು ಈ ಹಿಂದೆ ವಿಫಲವಾದಂತೆ ಈ ಬಾರಿ ಆಗದಿರಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಇದೆ 29 ರಿಂದ ಹೆಲ್ಮೆಟ್ ಧರಿಸದೇ ಬರುವ ಬೈಕ್ ಸವಾರರಿಗೆ ಪೆಟ್ರೋಲ್ ಮಾರಾಟ ಮಾಡದಂತೆ ಬಂಕ್ ವರ್ತಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
![follow the road rule get a flower](https://etvbharatimages.akamaized.net/etvbharat/prod-images/4542050_klb.jpg)
ಇದು ಜಾರಿಗೆ ಬಂದಿದ್ದೇ ಆದರೆ ಬೈಕ್ ಸವಾರರು ಹೆಲ್ಮೆಟ್ ಧರಿಸಿಯೇ ಪೆಟ್ರೋಲ್ ಹಾಕಿಸಿಕೊಳ್ಳಬೇಕು. ಇನ್ನು ಪೆಟ್ರೋಲ್ ಹಾಕಿಸಿಕೊಳ್ಳಲು ಬರುವ ಬೈಕ್ ಸವಾರರು ಹೆಲ್ಮೆಟ್ ಧರಿಸಿಯೇ ಬನ್ನಿ ಎಂದು ಪೆಟ್ರೋಲ್ ಬಂಕ್ನವರು ಗ್ರಾಹಕರಿಗೆ ಗುಲಾಬಿ ಹೂ ನೀಡುವ ಮೂಲಕ ಮನವಿ ಮಾಡಿದರು.
ಒಟ್ಟಿನಲ್ಲಿ ಟ್ರಾಫಿಕ್ ನೂತನ ಕಾಯ್ದೆ ಅನ್ವಯ ದುಬಾರಿ ದಂಡದಿಂದ ಹೆದರಿದ ವಾಹನ ಸವಾರರಿಗೆ ರಾಜ್ಯ ಸರ್ಕಾರ ದಂಡ ಕಡಿತಗೊಳಿಸಿದೆ ಎಂದು ಸಂತಸ ಪಡುತ್ತಿದ್ದ ವಾಹನ ಸವಾರರಿಗೆ, ಇದೀಗ ಜಿಲ್ಲೆಯ ಪೊಲೀಸರು ಕೈಗೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮದಿಂದ ಮತ್ತೆ ಬಿಸಿ ಮುಟ್ಟಿಸಿದೆ.