ಕಲಬುರಗಿ: ಪಬ್ ಜಿ ಆಟಕ್ಕೆ ಯುವಕನೋರ್ವ ಬಲಿಯಾಗಿರುವ ನಗರದಲ್ಲಿ ನಡೆದಿದೆ. ಇಂಜಿನಿಯರಿಂಗ್ ಓದುತ್ತಿದ್ದ ಪ್ರವೀಣ್ ಪಾಟೀಲ್ ಪಬ್ ಜಿ ಆಟದಿಂದ ಹಣ ಕಳೆದುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೆನ್ನಾಗಿ ಓದಿ ಇಂಜಿನಿಯರ್ ಆಗಿ ಮನೆಗೆ ಆಧಾರವಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನೊಂದಡೆ ಮಿತ್ರನ ಅಗಲಿಕೆಗೆ ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಪ್ರವೀಣ್, ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ. ನಿನ್ನೆ (ಭಾನುವಾರ) ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಪ್ರವೀಣ್ ಮನೆಯಲ್ಲೇ ಇದ್ದ. ಪ್ರವೀಣ್ ತಾಯಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣಕ್ಕೆ ಹೈದರಾಬಾದ್ಗೆ ತೆರಳಿದ್ದರು. ತಂದೆ ತಮ್ಮೂರಿಗೆ ತೆರಳಿ ಜಮೀನಿನಲ್ಲಿ ಬಿತ್ತನೆ ಕೆಲಸ ಕಾರ್ಯಗಳನ್ನು ನೋಡೋದಕ್ಕೆ ಹೋಗಿದ್ದರು. ತಡರಾತ್ರಿ ಹೈದರಾಬಾದ್ನಿಂದ ತಾಯಿ ಮನೆಗೆ ಬಂದು ಬಾಗಿಲು ತಟ್ಟಿದಾಗ ಪ್ರವೀಣ್ ಬಾಗಿಲು ತೆಗೆದಿರಲಿಲ್ಲ. ಬಳಿಕ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಪ್ರವೀಣ್ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.
ಪ್ರವೀಣ್ ಪಾಟೀಲ್ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲೇಜಿನಲ್ಲೇ ತಾಯಿ ಕೂಡ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಇತ್ತೀಚೆಗೆ ಕೆಲ ದಿನಗಳಿಂದ ಮೊಬೈಲ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಮೊಬೈಲ್ನಲ್ಲಿ ಬೆಟ್ ಕಟ್ಟಿ ಪಬ್ ಜಿ ಗೇಮ್ ಆಡುತ್ತಿದ್ದನಂತೆ. ಪಬ್ ಜಿ ಗೇಮ್ ನಿಂದ ಸರಿ ಸುಮಾರು 80 ಸಾವಿರದಷ್ಟು ದುಡ್ಡು ಕೂಡ ಕಳೆದುಕೊಂಡಿದ್ದನಂತೆ. ಇದರಿಂದ ಬೇಸತ್ತಿದ್ದ ಪ್ರವೀಣ್ ಜೀವನದಲ್ಲಿ ಜಿಗುಪ್ಸೆ ಕೂಡ ಹೊಂದಿದ್ದ.
ಹಾಗಾಗಿ ಕಳೆದ ಕೆಲ ದಿನಗಳಿಂದ ಆತ ಒಂಟಿಯಾಗಿಯೇ ಇರುತ್ತಿದ್ದ. ಹಾಗಾಗಿಯೇ ನಿನ್ನೆ ಪ್ರವೀಣ್ ತಾಯಿ ಕೂಡ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೈದರಾಬಾದ್ಗೆ ಹೋಗೋಣ ಬಾ ಎಂದು ಕರೆದರು ಹೋಗದೆ ಮನೆಯಲ್ಲೇ ಒಬ್ಬನೆ ಇದ್ದನಂತೆ. ಬಳಿಕ ಒಂದು ಕಡೆ ಪಬ್ ಜಿಯಲ್ಲಿ 80 ಸಾವಿರ ಹಣ ಕಳೆದುಕೊಂಡು ಜಿಗುಪ್ಸೆ ಹೊಂದಿದ್ದರಿಂದ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೇಸ್ ದಾಖಲಾಗಿದೆ.
ಈ ಸಂಬಂಧ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಇರೋ ಒಬ್ಬ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉನ್ನತ ಹುದ್ದಯೆಲ್ಲಿ ನೋಡಬೇಕು ಎಂದು ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿಯ ಕನಸು ನುಚ್ಚು ನೂರಾಗಿದೆ. ಇನ್ನು ಮಕ್ಕಳು ಶಾಲಾ- ಕಾಲೇಜಿನಲ್ಲಿ ಆಗಲಿ ಮನೆಯಲ್ಲಿ ಆಗಲಿ ಮೊಬೈಲ್ ನಲ್ಲೇ ಅತಿ ಹೆಚ್ಚು ಕಾಲ ಕಳೆಯೋದಕ್ಕೆ ಮುಂದಾದಾಗ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸುವಂತಹ ಕೆಲಸಕ್ಕೆ ಮುಂದಾಗಬೇಕು. ಈ ಆನ್ಲೈನ್ ಮೂಲಕ ಪಬ್ ಜಿ, ಸೇರಿದಂತೆ ಇನ್ನಿತರ ಹಣ ಕಟ್ಟಿ ಗೇಮ್ ಆಡುವಂತಹ ಆಟಗಳಿಗೆ ಸರ್ಕಾರ ಬ್ರೇಕ್ ಹಾಕುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್: ತಂದೆ ಮಗ ಸಾವು, ಅಳಿಯನ ಸ್ಥಿತಿ ಗಂಭೀರ..ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ