ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿ ಸೇರಿ ಆರು ಜನರಿಗೆ ಕಂಟಕ ಎದುರಾಗಿದೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂಗೆ ನೀಡಲಾಗಿದ್ದ ಮಾದರಿಯಲ್ಲಿಯೇ ಈ ಆರು ಜನ ಆರೋಪಿಗಳಿಗೆ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ.
ಕರ್ನಾಟಕದ ಅಪರಾಧ ಪ್ರಕರಣಗಳಲ್ಲಿ ಇಂತಹ ಅರೆಸ್ಟ್ ವಾರೆಂಟ್ ಜಾರಿ ಆಗುವುದು ಬಲು ಅಪರೂಪ. ತನಿಖಾ ಹಂತದಲ್ಲಿ ಜಾರಿ ಮಾಡಲಾಗುವ ವಾರೆಂಟ್ ಅನ್ವಯ ಆರೋಪಿಗಳು ಎಲ್ಲಿದ್ದರೂ ಬಂದು ಶರಣಾಗಲೇಬೇಕು. ಇಲ್ಲದಿದ್ದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಮಾಸ್ಟರ್ ಮೈಂಡ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿಗೆ ಕಲಬುರಗಿಯ 3ನೇ ಜೆಎಂಎಫ್ಸಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂಗೆ ನೀಡಲಾಗಿದ್ದ ಅರೆಸ್ಟ್ ವಾರೆಂಟ್ ಉಲ್ಲೇಖಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು.
ಒಂದು ವಾರದೊಳಗಡೆ ಆರೋಪಿಗಳು ಸರೆಂಡರ್ ಆಗದಿದ್ರೆ ಉದ್ಘೋಷಿತ ಅಪರಾಧಿ ಎಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಎಲ್ಲಾ ಸಾಧ್ಯತೆಯೂ ಇದೆ. ಕಳೆದ 15 ದಿನಗಳಿಂದ ದಿವ್ಯಾ ಸೇರಿ ಆರು ಜನ ಆರೋಪಿಗಳು ಸಿಐಡಿಯಿಂದ ತಲೆಮರೆಸಿಕೊಂಡಿದ್ದಾರೆ.
ಸಿಐಡಿಯಿಂದ 6 ವಿಶೇಷ ತಂಡ ರಚನೆ: ದಿವ್ಯಾ ಹಾಗರಗಿ ಮತ್ತು ಸಹಚರರ ಬಂಧನಕ್ಕೆ ಸಿಐಡಿ ತೀವ್ರ ಶೋಧ ಕಾರ್ಯಾರಂಭಿಸಿದೆ. ಡಿಜಿಪಿ, ಎಸ್ಪಿ ಕಲಬುರಗಿಯಲ್ಲಿ ಬಿಡಾರ ಹೂಡಿ ಬಂಧನಕ್ಕೆ ಆರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಹಗಲಿರುಳೆನ್ನದೆ ದಿವ್ಯಾ ಅವರ ತೀವ್ರ ತಲಾಶ್‌ಗೆ ಸಿಐಡಿಯ ಆರು ತಂಡಗಳು ಕೆಲಸ ಮಾಡುತ್ತಿವೆ. ತೀವ್ರ ತಲಾಶ್ ನಡೆಸುತ್ತಿದ್ದರೂ ಇಲ್ಲಿಯವರೆಗೆ ದಿವ್ಯಾ ಲೊಕೇಷನ್ ಸುಳಿವು ಸಿಕ್ಕಿಲ್ಲ.
ಇದನ್ನೂ ಓದಿ: ರಾಯಚೂರು: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ