ಕಲಬುರಗಿ : ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿಜಯ ಸಾಧಿಸಿದ ವಾರ್ಡ್ ನಂ. 24ರ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಅವರಿಗೆ ಕಾರ್ಪೊರೇಟರ್ ಆಗಿ ಪ್ರತಿಜ್ಞಾ ವಿಧಿ ಸ್ವೀಕರಿಸದಂತೆ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಚುನಾವಣೆಗೆ ಸ್ಪರ್ಧಿಸಬೇಕಾದರೆ 21 ವರ್ಷ ವಯಸ್ಸಾಗಿರಬೇಕು. ಆದ್ರೆ, 20 ವರ್ಷ ವಯಸ್ಸಿನ ಪ್ರಿಯಾಂಕಾ, ಚುನಾವಣಾ ಅಧಿಕಾರಿಗಳಿಗೆ 21 ವರ್ಷ ಅಂತಾ ಸುಳ್ಳು ಮಾಹಿತಿ ನೀಡಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 24ರಿಂದ ಸ್ಪರ್ಧಿಸಿ ವಿಜಯ ಸಾಧಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನೂರ್ ಫಾತೀಮಾ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಕುರಿತು ವಿಚಾರಣೆ ನಡೆಸಿದ ಕಲಬುರಗಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಿಯಾಂಕಾ ಅವರಿಗೆ ಕಾರ್ಪೊರೇಟರ್ ಆಗಿ ಪ್ರತಿಜ್ಞಾ ವಿಧಿ ಸ್ವೀಕರಿಸದಂತೆ ಹಾಗೂ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಭಾಗವಹಿಸದಂತೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಡಿ.4ರಂದು ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 15ರಂದು ಮತ್ತೆ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಇತ್ತ ಜಿಲ್ಲಾ ನ್ಯಾಯಾಲಯದ ಮಧ್ಯಂತರ ಆದೇಶ ಪ್ರಶ್ನಿಸಿ ಪ್ರಿಯಾಂಕಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.