ಕಲಬುರಗಿ: ಈ ಭಾಗದ ರೈತರು ಹತ್ತಿ ಬೆಳೆದು ಸಂತಸದಲ್ಲಿದ್ದಾರೆ. ಇದೀಗ ಸರ್ಕಾರ ನೀಡಿದ ಉತ್ತಮ ಬೆಲೆಯಿಂದ ಹತ್ತಿ ಮಾರಾಟದಲ್ಲಿ ದಾಖಲೆ ಬರೆದಿದ್ದಾರೆ.
ತೊಗರಿ ನಾಡು ಕಲಬುರಗಿ ಜಿಲ್ಲೆಯ ಹತ್ತಿ ಬೆಳೆದ ರೈತರ ಮೊಗದಲ್ಲಿ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಜಿಲ್ಲೆಯ ರೈತರು ಈ ಬಾರಿ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಹತ್ತಿ ಮಾರಾಟ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಹತ್ತಿಗೆ 5,550 ರೂಪಾಯಿ ಬೆಂಬಲ ಬೆಲೆ ಘೋಷಿಸಿದೆ. ಸದ್ಯ ಮಾರುಕಟ್ಟೆಯಲ್ಲಿ 3,300 ರಿಂದ ಗರಿಷ್ಠ 5,100 ರೂ. ದರವಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದ ಬೆಂಬಲ ಬೆಲೆ ಸಿಕ್ಕಿರುವುದರಿಂದ ಕಲಬುರಗಿ ಜಿಲ್ಲೆಯ ರೈತರು ಫುಲ್ ಖುಷ್ ಆಗಿದ್ದಾರೆ.
ಜಿಲ್ಲೆಯಲ್ಲಿ ಎರಡು ಹತ್ತಿ ಮಿಲ್ಗಳಿದ್ದು ರೈತರಿಂದ ಖರೀದಿಸಿದ ಹತ್ತಿಯನ್ನು ಇವುಗಳಿಗೆ ಪೂರೈಕೆ ಮಾಡಲಾಗುತ್ತದೆ. ಬೆಂಬಲ ಬೆಲೆಯಲ್ಲಿ ಇದುವರೆಗೆ 5,962 ರೈತರು ಹತ್ತಿ ಮಾರಾಟ ಮಾಡಿದ್ದಾರೆ. ಹತ್ತಿ ಮಾರಾಟ ಮಾಡಿದ ರೈತರ ಖಾತೆಗೆ ಹಣ ಸಂದಾಯ ಕೂಡ ಆಗಿದೆ. ಇಲ್ಲಿಯವರೆಗೆ ಒಟ್ಟು 88.5 ಕೋಟಿ ರೂಪಾಯಿ ಹಣ ಸಂದಾಯವಾಗಿದೆ. 1,66,338 ಕ್ವಿಂಟಾಲ್ ಹತ್ತಿ ಕೇವಲ ಒಂದೂವರೆ ತಿಂಗಳಲ್ಲಿ ಖರೀದಿಸಲಾಗಿದೆ. ಪ್ರತಿ ಕ್ವಿಂಟಾಲ್ ಗೆ 5500 ರೂ. ಬೆಂಬಲ ಬೆಲೆ ಇರುವುದರಿಂದ ರೈತರು ಸಂತೋಷವಾಗಿದ್ದಾರೆ. ಜಿಲ್ಲೆಯಲ್ಲಿರುವ ಗಜಾನನ ಕಾಟನ್ ಮಿಲ್, ಜೇವರ್ಗಿ ತಾಲೂಕಿನ ಮಂಜೀತ್ ಮೀಲ್ ಮೂಲಕ ಹತ್ತಿ ಖರೀದಿ ಮಾಡಲಾಗುತ್ತಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ವರೆಗೆ ತೊಗರಿ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಹತ್ತಿ ಬೆಳೆಗಾರರು ಹೊರಗಿನ ಮಾರುಕಟ್ಟೆ ಮಧ್ಯವರ್ತಿಗಳಿಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದರು. ಲಾಕ್ ಡೌನ್ ಪರಿಣಾಮ ಹೊರಗಿನವರು ಖರೀದಿಗೆ ಬರಲಿಲ್ಲ. ಸರ್ಕಾರ ಉತ್ತಮ ಬೆಂಬಲ ಬೆಲೆ ಘೋಷಣೆ ಮಾಡಿರುವುದರಿಂದ ಜಿಲ್ಲೆಯ ರೈತರಿಗೆ ಬಹಳ ಅನುಕೂಲವಾಗಿದೆ. ಪ್ರಸಕ್ತ ವರ್ಷ ಉತ್ತಮ ಹತ್ತಿ ಬೆಳೆ ಕೂಡ ಬಂದಿದ್ದು ಸಂತಸ ಮೂಡಿಸಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.