ಕಲಬುರ್ಗಿ : ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಲ್ಯಾಬ್ ಹೊಂದಿರಲೇಬೇಕು. ಇಲ್ಲದಿದ್ದಲ್ಲಿ ಅಂತಹ ಕಾಲೇಜುಗಳ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಎಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕು ಆರಂಭಕ್ಕೂ ಮುನ್ನ ಕೇವಲ 2 ಲ್ಯಾಬ್ಗಳು ಮಾತ್ರ ಇದ್ದವು. ನಂತರದಲ್ಲಿ 71 ಲ್ಯಾಬ್ಗಳನ್ನ ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದಾಗಿ ನಿತ್ಯ 15 ಸಾವಿರ ಜನರ ಗಂಟಲು ದ್ರವ ಪರೀಕ್ಷಿಸಬಹುದಾಗಿದೆ. ಆದರೆ, ರಾಜ್ಯದ ಹಲವು ವೈದ್ಯಕೀಯ ಕಾಲೇಜುಗಳು ಕೊರೊನಾ ಪ್ರಯೋಗಾಲಯ ಹೊಂದಿಲ್ಲ. ಹೀಗಾಗಿ ಐಸಿಎಂಆರ್ನ ನಿಯಮಗಳನ್ನ ಕಡ್ಡಾಯವಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳು ಪಾಲನೆ ಮಾಡಬೇಕು. ಇಲ್ಲದಿದ್ದಲ್ಲಿ ಅಂತಹ ಕಾಲೇಜುಗಳ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಟೆಲಿ ಐಸಿಯು ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದ ರಾಜ್ಯದ ಮೂಲೆ ಮೂಲೆಯಲ್ಲಿರೋ ರೋಗಿಗಳಿಗೆ ಏಕರೂಪದ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಜೀವ ಉಳಿಸಲು ಅಗತ್ಯ ಚಿಕಿತ್ಸೆಯನ್ನು ಬೆಂಗಳೂರಿನಲ್ಲಿರುವ ತಜ್ಞ ವೈದ್ಯರಿಂದ ಸಲಹೆ ಪಡೆದು ನೀಡಲಾಗುತ್ತದೆ. ರೋಗಿಯ ಮುಂದೆ ಹೆಚ್ಡಿ ಕ್ಯಾಮೆರಾ ಅಳವಡಿಕೆ ಮಾಡಿ, ನಿಗಾ ಇಡಲಾಗುತ್ತದೆ. ಬೆಂಗಳೂರಿನಿಂದ ಮಾನಿಟರ್ ವ್ಯವಸ್ಥೆ ಮಾಡಲಾಗಿದೆ. ಕಲಬುರ್ಗಿಯಲ್ಲಿ ನಾಳೆಯಿಂದ ಈ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಟೆಲಿ ಐಸಿಯು ವ್ಯವಸ್ಥೆ ಅಸ್ತಿತ್ವಕ್ಕೆ ಬರಲಿದೆ. ರಾಜ್ಯದ ಇತರೆ ಆಸ್ಪತ್ರೆಗಳಿಗೂ ಇದನ್ನು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.