ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪಿಲಕಮ್ಮ ಪ್ರದೇಶದಲ್ಲಿ ಎರಡು ವರ್ಷದ ಗಂಡು ಮಗುವಿಗೆ ಕೊರೊನಾ ಪಾಸಿಟಿವ್ ಇರುವದು ದೃಢಪಟ್ಟಿದೆ ಎಂದು ಡಿಸಿ ಬಿ.ಶರತ್ ತಿಳಿಸಿದ್ದಾರೆ.
ಈಗಾಗಲೇ ಕಲಬುರಗಿಯಲ್ಲಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ 13 ನೇ ಪಾಸಿಟಿವ್ ಕೇಸ್ ಮಗುವಿನಲ್ಲಿ ಪತ್ತೆಯಾಗಿದೆ. ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದ್ದು ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ತಂದಿದೆ.
ಸೋಂಕು ತಗುಲಿದ ಮಗುವಿನ ತಂದೆ ರೈಲ್ವೆಯಲ್ಲಿ ಬಿಸ್ಕಟ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆತನ ಗಂಟಲು ದ್ರವವನ್ನು ಕೂಡಾ ಪರೀಕ್ಷೆಗೆ ಕಳಿಸಲಾಗಿದೆ.
ಸದ್ಯ ಮಗು ಮತ್ತು ಆತನ ಪೋಷಕರು ವಾಸವಿದ್ದ ಪಿಲಕಮ್ಮ ಬಡಾವಣೆಗೆ ಜನ ಸಂಚಾರ ನಿಷೇಧ ಹೇರಲಾಗಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ದಾರಿ ಬಂದ್ ಮಾಡಿದ್ದಾರೆ.