ಕಲಬುರಗಿ: ಹೆಮ್ಮಾರಿ ಕೊರೊನಾ ವಿರುದ್ಧ ಹಗಲಿರುಳು ಎನ್ನದೆ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಆಯುರ್ವೇದ ಕಷಾಯ ನೀಡಲಾಗುತ್ತಿದೆ.
ಕೊರೊನಾಗೆ ಕಷಾಯವೇ ಮನೆ ಮದ್ದು ಎನ್ನಲಾಗುತ್ತದೆ. ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆ ಪಿಎಸ್ಐ ವಿಜಯಕುಮಾರ್ ಬಾವಗಿ ಅವರು ತಮ್ಮ ಸಿಬ್ಬಂದಿ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ವಹಿಸಿ ವಿನೂತನ ಪ್ರಯತ್ನ ನಡೆಸಿದ್ದಾರೆ. ಕೊರೊನಾ ಕರ್ತವ್ಯದಲ್ಲಿ ನಿರತರಾದ ಪೊಲೀಸರ ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಆಯುರ್ವೇದ ಕಷಾಯ ನೀಡಲಾಗುತ್ತಿದೆ.
ಪೊಲೀಸ್ ಠಾಣೆಯ ಮಹಿಳಾ ಕಾನ್ಸ್‌ಟೇಬಲ್ ಮಾಲಂಬಿ ಅವರು ಠಾಣೆಯ ಸಿಬ್ಬಂದಿಗೆ ಪ್ರತಿನಿತ್ಯ ಎರಡು ಬಾರಿ ಕಷಾಯ ತಯಾರಿಸಿ ವಿತರಿಸುತ್ತಿದ್ದಾರೆ.