ಕಲಬುರಗಿ : ಕೊರೊನಾ ಕಾಟದಿಂದ ಬೇಸತ್ತಿದ್ದ ಜಿಲ್ಲೆಯ ಜನ ಸದ್ಯ ಕೋವಿಡ್ ಕಡಿಮೆಯಾಗ್ತಿದೆ ಅಂತಾ ನಿಟ್ಟುಸಿರು ಬಿಡುವಾಗಲೇ ಮತ್ತೆ ಕೋವಿಡ್ ಟೆನ್ಷನ್ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದಂತೆ ಕಲಬುರಗಿ ಜಿಲ್ಲಾಡಳಿತ ಅಲರ್ಟ್ ಆಗಿದೆ.
ಆಳಂದ ತಾಲೂಕಿನ ಖಜೂರಿ, ಹಿರೋಳ್ಳಿ, ಅಫಜಲಪುರ ತಾಲೂಕಿನ ಬಳೂರ್ಗಿ ಸೇರಿದಂತೆ ಜಿಲ್ಲೆಯ ಗಡಿಯಲ್ಲಿ ಟೈಟ್ ಚೆಕ್ಕಿಂಗ್ ನಡೆಸಲಾಗ್ತಿದೆ. ಐದು ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಬರುವ ಪ್ರತಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಚೆಕ್ ಪೋಸ್ಟ್ಗಳಲ್ಲಿ ಕೋವಿಡ್ ತಪಾಸಣಾ ಕೇಂದ್ರ ತೆರೆಯಲಾಗಿದೆ. ಮಹಾರಾಷ್ಟ್ರದಿಂದ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿರುವ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಕೋವಿಡ್ ನೆಗೆಟಿವ್ ರಿಪೋರ್ಟ್ ಅಥವಾ ಒನ್ ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ. ಇಲ್ಲದಿದ್ರೆ ಮುಲಾಜಿಲ್ಲದೆ ವಾಪಸ್ ಕಳಿಸುತ್ತಿದ್ದಾರೆ.
ಸದ್ಯ ಕಲಬುರಗಿಯಲ್ಲಿ ಕೋವಿಡ್ ಆತಂಕ ಕಡಿಮೆ ಆಗುತ್ತಿರುವಾಗಲೇ ಮತ್ತೆ ಮಹಾರಾಷ್ಟ್ರದಲ್ಲಿ ಏರಿಕೆ ಆಗ್ತಿರುವ ಕೊರೊನಾ ಸೋಂಕು ಹಾಗೂ ಡೆಲ್ಟಾ ಪ್ಲಸ್ ವೈರಸ್ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.