ಕಲಬುರಗಿ: ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕಾದರೆ ಯುವಕರು ಲಂಚ ಕೊಡಬೇಕು, ಯುವತಿಯರು ಮಂಚ ಹತ್ತಬೇಕು ಅಂತ ಶಾಸಕ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಮನ್ ಮ್ಯಾನ್ ಸಂಕಟ: ಮುಖ್ಯಮಂತ್ರಿ ತಾವೊಬ್ಬ ಕಾಮನ್ಮ್ಯಾನ್ ಎಂದು ಹೇಳುತ್ತಾರೆ. ಇವರ ಅಸಮರ್ಥ ಆಡಳಿತದಿಂದಾಗಿ ಕಾಮನ್ ಮ್ಯಾನ್ ಸಂಕಟಪಡುತ್ತಿದ್ದಾರೆ. ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು, ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದೆ. ಈ ಮೂಲಕ ಇದೊಂದು ಲಂಚದ ಮತ್ತು ಮಂಚದ ಸರ್ಕಾರವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ಮೂಲಕ ಅವರು ಟೀಕಿಸಿದರು.
ವ್ಯಾಪಾರ ಸೌಧ: ಪ್ರತಿಯೊಂದು ಪರೀಕ್ಷೆಗಳಲ್ಲಿ ಹೀಗೆ ಅಕ್ರಮ ನಡೆದರೆ ಬಡವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಇದೊಂದು ಅಸಮರ್ಥ ಸರ್ಕಾರ. ಏನೇ ಅಕ್ರಮ ಮಾಡಿದರೂ ನಡೆಯುತ್ತಿದೆ ಎನ್ನುವುದು ಅಕ್ರಮ ಮಾಡುವವರಿಗೆ ಹಾಗೂ ಮಧ್ಯವರ್ತಿಗಳಿಗೆ ಗೊತ್ತಾಗಿದೆ. ಆದರೆ, ಸುಮಾರು 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎನ್ನುವುದು ಗಮನಾರ್ಹ ಸಂಗತಿ. ಶೇ 40 ವ್ಯವಹಾರದಲ್ಲಿ ವಿಧಾನಸೌಧವನ್ನೇ ವ್ಯಾಪಾರ ಸೌಧ ಮಾಡಿಕೊಂಡವರ ಬಗ್ಗೆ ಅಭ್ಯರ್ಥಿಗಳಿಗೆ ತೀವ್ರ ಅಸಮಾಧಾನವಿದೆ ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ಸೇರಿದಂತೆ ಇತ್ತೀಚಿಗೆ ನಡೆದ ಕೆಪಿಟಿಸಿಎಲ್ ಹಾಗೂ ಪಿಡಬ್ಲ್ಯೂಡಿ ಇಲಾಖೆಯಡಿಯಲ್ಲಿನ ಎಇ ಹಾಗೂ ಜೆಇ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿಯೂ ಅಕ್ರಮ ನಡೆದ ಬಗ್ಗೆ ಮಾಹಿತಿ ಇದೆ. ಈ ಎಲ್ಲ ಪರೀಕ್ಷೆಗಳ ಅಕ್ರಮ ಕುರಿತಂತೆ ಸಮಗ್ರ ವಿಚಾರಣೆ ನಡೆಸಲು ಸರ್ಕಾರ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡಲಿ ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಹೊಸ ಇತಿಹಾಸ: ಆಂಧ್ರದಲ್ಲಿ 2.47 ಲಕ್ಷ ವರ್ಷ ಹಳೆಯ ಶಿಲಾಯುಗ ಉಪಕರಣ ಪತ್ತೆ, ವಿಶ್ವದಲ್ಲಿ ಸಂಚಲನ