ಕಲಬುರಗಿ: ಕಾಂಗ್ರೆಸ್ ಪಕ್ಷ ನೀಚ ರಾಜಕಾರಣ ಮಾಡುತ್ತಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದಾಗ ರಾಜ್ಯದಲ್ಲಿ ಬೆಂಕಿ ಹಚ್ಚೋ ಕೆಲಸ ಮಾಡುವುದರಲ್ಲಿ ಕಾಂಗ್ರೆಸ್ ನವರು ನಿಸ್ಸೀಮರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರವಾಸ ಕೈಗೊಂಡಿರುವ ನಳಿನ್ ಕುಮಾರ್ ಕಟೀಲ್ ಕಲಬುರಗಿಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ನಾಯಕರು ಮೊದಲು ಗೊಂದಲ ಸೃಷ್ಟಿಸಿ ನಂತರ ಸುಖ ಅನುಭವಿಸುತ್ತಾರೆ. ಡಿ ಜೆ ಹಳ್ಳಿ ಗಲಭೆ ಕಾಂಗ್ರೆಸ್ ನ ಆಂತರಿಕ ಗೊಂದಲದಿಂದ ಆಗಿದೆ. ಸಿದ್ದರಾಮಯ್ಯ-ಡಿಕೆಶಿ ನಡುವಿನ ಗೊಂದಲದಿಂದಲೇ ಕೆ ಜಿ ಹಳ್ಳಿ , ಡಿ ಜೆ ಹಳ್ಳಿ ಗಲಭೆ ಸಂಭವಿಸಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ವೃದ್ಧಾಶ್ರಮವಾಗಿ ಮಾರ್ಪಟ್ಟಿದೆ. ಪಕ್ಷದ ರಾಷ್ಟೀಯ ಅಧ್ಯಕ್ಷರನ್ನು ನೇಮಕ ಮಾಡಲು ಅವರಿಗೆ ಆಗುತ್ತಿಲ್ಲಾ. ವಿನಾಕಾರಣ ಗೊಂದಲ ಸೃಷ್ಟಿಸಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ವಿಶ್ವನಾಥ್ ಹೇಳಿಕೆ ವಿಚಾರ ವೈಯಕ್ತಿಕ:
ಟಿಪ್ಪು ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ನೀಡಿರುವ ಹೇಳಿಕೆ ವೈಯಕ್ತಿಕವಾಗಿದೆ. ಬಿಜೆಪಿಯು ಟಿಪ್ಪು ವಿರುದ್ಧ ಹೋರಾಡುತ್ತಾ ಬಂದಿದೆ. ಟಿಪ್ಪುವಿನ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟ ನಿಲುವಿದೆ. ಅದಕ್ಕೆ ಮುಂದೆಯೂ ಬದ್ಧವಾಗಿರುತ್ತೇವೆ. ವಿಶ್ವನಾಥ್ ಅವರು ನಮ್ಮ ಪಕ್ಷದಲ್ಲಿದ್ದರೂ ಸಹ ಟಿಪ್ಪುವಿನ ಕುರಿತಾದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಕಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಜಯೇಂದ್ರ ವಿರುದ್ಧ 5 ಸಾವಿರ ಕೋಟಿ ಭ್ರಷ್ಟಾಚಾರ ತಳ್ಳಿಹಾಕಿದ ಕಟೀಲ್:
ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ಕೇಳಿಬಂದಿರುವ 5 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಕಾಂಗ್ರೆಸ್ ನವರೇ ಪತ್ರ ಸೃಷ್ಟಿಸಿದ್ದಾರೆಯೇ ಹೊರತು ಬಿಜೆಪಿ ಶಾಸಕರು ಪತ್ರ ಬರೆದಿಲ್ಲ. ಅವರು ಪತ್ರ ಬರೆದುಕೊಂಡೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ವಿಜಯೇಂದ್ರ ವಿರುದ್ಧದ ಆರೋಪ ನಿರಾಧಾರ. ಸಿಎಂ ಯಡಿಯೂರಪ್ಪ ದಕ್ಷರಿದ್ದಾರೆ, ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದರು.