ಕಲಬುರಗಿ : ಇಡೀ ರಾಜ್ಯದ ಗಮನ ತನ್ನತ್ತ ಸೆಳೆದ ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಆರು ತಿಂಗಳಾದರೂ ಸಹ ಇದುವರೆಗೆ ಮೇಯರ್ ಸ್ಥಾನದ ಬಿಕ್ಕಟ್ಟು ಬಗೆಹರಿದಿಲ್ಲ. ಅಭಿವೃದ್ಧಿ ಕಾಮಗಾರಿಗಳ ಕುಂಠಿತ, ಅಧಿಕಾರಿಗಳ ಭ್ರಷ್ಟಾಚಾರ ಒಂದು ಕಡೆಯಾದರೆ ಮತ್ತೊಂದೆಡೆ ಬೇಸಿಗೆ ಆರಂಭಕ್ಕೂ ಮುನ್ನ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದರೆ, ಮೇಯರ್ ಆಯ್ಕೆ ಬಿಕ್ಕಟ್ಟು ಶೀಘ್ರ ಬಗೆಹರಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಕಲಬುರಗಿ ಮಹಾನಗರ ಪಾಲಿಕೆಗೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆದಿತ್ತು. 55 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 27, ಬಿಜೆಪಿ 24 ಮತ್ತು ಜೆಡಿಎಸ್ ಪಕ್ಷ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಚುನಾವಣೆಯಲ್ಲಿ ಮತದಾರರು ಯಾವ ಪಕ್ಷಕ್ಕೂ ಸ್ಪಷ ಬಹುಮತ ನೀಡದ ಹಿನ್ನೆಲೆ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಇತ್ತ ಪಾಲಿಕೆ ಅಧಿಕಾರ ಗದ್ದುಗೆ ಏರಲು ಬಿಜೆಪಿ ಮೇಯರ್, ಉಪಮೇಯರ್ ಮೀಸಲಾತಿಯನ್ನ ದಿಢೀರ್ ಬದಲಾವಣೆ ಮಾಡುವುದರ ಜತೆಗೆ ಕಲಬುರಗಿಗೆ ಐವರು ಸಂಬಂಧವಲ್ಲದ ಎಮ್‌ಎಲ್‌ಸಿಗಳನ್ನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು. ಆದರೆ, ಬಿಜೆಪಿ ಕಾನೂನು ಬಾಹಿರ ಚಟುವಟಿಕೆ ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಕಲಬುರಗಿ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ರಿಟ್ ಅರ್ಜಿಯನ್ನ ಸಲ್ಲಿಸಿತ್ತು. ಹೀಗಾಗಿ, ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಹಳೆ ಮತದಾರರ ಪಟ್ಟಿಯಂತೆ ಮತ್ತು ಹಳೆ ಮೀಸಲಾತಿಯಂತೆ ಚುನಾವಣೆ ನಡೆಸಲು ಆದೇಶ ನೀಡಿತ್ತು.
ಚುನಾವಣೆ ನಡೆಸುವಂತೆ ಆಗ್ರಹ : ಆದರೆ, ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಬಿಜೆಪಿ ಪಕ್ಷ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಸದ್ಯ ಅರ್ಜಿ ನ್ಯಾಯಾಲಯದಲ್ಲಿದ್ದ ಕಾರಣ ಮೇಯರ್ ಇಲ್ಲದೆ ಮತ್ತು ಸದಸ್ಯರಿಗೆ ಅಧಿಕಾರವಿಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸಲು ಆಗುತ್ತಿಲ್ಲ ಮತ್ತು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಅಂತಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಸರ್ಕಾರ ಮುತುವರ್ಜಿವಹಿಸಿ ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥ್ಯಗೊಳಿಸಿ ಮೇಯರ್ ಚುನಾವಣೆ ನಡೆಸುವಂತೆ ಆಗ್ರಹಿಸಿದೆ.
ಕಾಂಗ್ರೆಸ್ ಆಕ್ರೋಶ : ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಆರು ತಿಂಗಳು ಕಳೆದರು ಸಹ ಮೇಯರ್ ಇಲ್ಲದೇ ಮತ್ತು ಸದಸ್ಯರಿಗೆ ಅಧಿಕಾರವಿಲ್ಲದೇ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನೆನಗುದಿಗೆ ಬಿದ್ದಿವೆ. ಜತೆಗೆ ವಾರ್ಡ್‌ಗಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಆಗುತ್ತಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಒಂದು ಕಡೆ ಅಭಿವೃದ್ಧಿ ಕೆಲಸಗಳು ನೆನಗುದಿಗೆ ಬಿದ್ದಿದ್ದರೆ, ಮತ್ತೊಂದೆಡೆ ಬಿರುಬೇಸಿಗೆ ಆರಂಭವಾಗಿದ್ದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸಾರ್ವಜನಿಕರ ಗೋಳು ಕೇಳೋರಿಲ್ಲದೆ ಕಂಗೆಟ್ಟು ಹೋಗಿದ್ದಾರೆ. ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರುವ ಪ್ರಯತ್ನಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ರೆ, ಇತ್ತ ಪಾಲಿಕೆಯಲ್ಲಿ ಅಧಿಕಾರವಿಲ್ಲ್ರ ಸದಸ್ಯರು ಬರಿಗೈಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದೇನೇ ಇರಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟದಿಂದ ಇದೀಗ ಕಲಬುರಗಿ ಮಹಾನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುವುದರ ಜತೆಗೆ ಬೇಸಿಗೆ ಆರಂಭವಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.
ಇದನ್ನೂ ಓದಿ: ಕುಟುಂಬಸಮೇತ ಚಿತ್ರಸಂತೆಗೆ ಭೇಟಿ ನೀಡಿದ ಬಿ.ಎಸ್.ಯಡಿಯೂರಪ್ಪ