ಕಲಬುರಗಿ: ಜಿಲ್ಲೆಯ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯ ವಿವಿಧ ವಿಭಾಗಗಳ ಮೂವರು ವ್ಯವಸ್ಥಾಪಕ ಅಧಿಕಾರಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಆರೋಪದಡಿ ದೂರು ದಾಖಲಾಗಿದೆ.
ಕಂಪನಿಯ ಸಿಮೆಂಟ್ ಲಾಜಿಸ್ಟಿಕ್ ವಿಭಾಗದ ಡಿಜಿಎಂ ಗೋಕುಲಕೃಷ್ಣ, ಹೆಚ್‍ಆರ್ ಮುಖ್ಯಸ್ಥ ನಾಗೇಶ್ವರರಾವ್ ಹಾಗೂ ಸೆಕ್ಯೂರಿಟಿ ಅಧಿಕಾರಿ ಶಮಶೀರಸಿಂಗ್ ಜಾತಿನಿಂದನೆ ಪ್ರಕರಣಕ್ಕೆ ಗುರಿಯಾದ ಎಸಿಸಿ ಸಿಮೆಂಟ್ ಕಂಪನಿಯ ಅಧಿಕಾರಿಗಳಾಗಿದ್ದಾರೆ.
ಎಸಿಸಿ ಘಟಕದಿಂದ ಲಾರಿಗಳ ಮೂಲಕ ಗೋವಾ ಸೇರಿದಂತೆ ದೇಶದ ನಾನಾ ರಾಜ್ಯಗಳಿಗೆ ಸಿಮೆಂಟ್ ಸಾಗಾಣಿಕೆ ಮಾಡುವ ಧನಲಕ್ಷ್ಮೀ ಟ್ರಾನ್ಸ್ಪೋರ್ಟ್ ಮಾಲೀಕ, ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ದೊರೆ ಈ ದೂರು ದಾಖಲಿಸಿದ ಸಂತ್ರಸ್ತರಾಗಿದ್ದಾರೆ.
ಟ್ರಾನ್ಸ್ಪೋರ್ಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರುದಾರ ಭೀಮರಾವ ದೊರೆ ಮತ್ತು ಎಸಿಸಿ ಕಂಪನಿ ಅಧಿಕಾರಿಗಳೊಂದಿಗೆ ಕಳೆದ ಹಲವು ತಿಂಗಳಿಂದ ತಕರಾರು ನಡೆಯುತ್ತಿತ್ತು ಎನ್ನಲಾಗಿದ್ದು, ಫೆ.11ರಂದು ಸಂಜೆ ಇದೇ ವಿಷಯಕ್ಕೆ ಮತ್ತೆ ವಾಗ್ವಾದ ಉಂಟಾಗಿದೆ. ಕಂಪನಿ ಆವರಣದಲ್ಲಿ ಪರಸ್ಪರ ಹೊಡೆದಾಟವೂ ನಡೆದಿದೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಕಂಪನಿ ಅಧಿಕಾರಿಗಳು ಅವಾಚ್ಯ ಪದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಭೀಮರಾವ್ ದೊರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಲಬುರಗಿ: ಕೃಷಿ ಕಾಯ್ದೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ