ಕಲಬುರಗಿ: ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಈ ಭಾಗದ ಜನರ ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮ ವಾಸ್ತವ್ಯದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನಾಲ್ಕು ಕಡೆ ಗ್ರಾಮ ವಾಸ್ತವ್ಯ ಏರ್ಪಡಿಸಲಾಗಿತ್ತು. ಆದ್ರೆ, ಭಾರಿ ಮಳೆಯಿಂದ ಕಲಬುರಗಿಯ ಹೇರೂರು (ಬಿ) ಗ್ರಾಮದ ಗ್ರಾಮ ವಾಸ್ತವ್ಯ ಮುಂದೂಡಲಾಯ್ತು. ಆದ್ರೆ ಮುಂದಿನ ತಿಂಗಳು ಹೇರೂರು ಗ್ರಾಮಕ್ಕೆ ತೆರಳುತ್ತೇನೆ. ಹೇರೂರು ಗ್ರಾಮಸ್ಥರ ಹಲವು ಬೇಡಿಕೆ ಈಡೇರಿಕೆಗಾಗಿ ಈಗಾಗಲೇ 5 ಕೋಟಿ ಹಣ ಮಂಜೂರು ಮಾಡಲಾಗಿದೆ. ಎಲ್ಲ ಹಳ್ಳಿಗೂ ಆದ್ಯತೆ ಮೇರೆಗೆ ಪ್ರಗತಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.
ಇವರು ಸರ್ಕಾರ ಬೀಳಿಸುವವರು:
ವಾಲ್ಮೀಕಿ ಸಮುದಾಯದವರಿಗೆ ಶೇ. 7.5 ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಬೀಳಿಸುವುದಾಗಿ ಗಡುವು ನೀಡಿದ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳಿಗೆ ಸಿಎಂ ಪರೋಕ್ಷವಾಗಿ ತಿರುಗೇಟು ನೀಡಿದರು.
ರಸ್ತೆಯಲ್ಲಿ ನಿಂತು ಮೀಸಲಾತಿ ಕೊಡಲು ಸಾಧ್ಯವಿದೆಯಾ? ಅದರ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಸರ್ಕಾರ ಉರುಳಿಸುವ ಬಗ್ಗೆ ಬಹಳ ಜನ ಮಾತನಾಡುತ್ತಾರೆ. ಅದರ ಬಗ್ಗೆ ಏನು ಮಾತನಾಡುವುದು ಬಿಡಿ ಎಂದು ನಿರ್ಲಕ್ಷ್ಯ ಮನೋಭಾವನೆಯಿಂದ ತಿರುಗೇಟು ನೀಡಿದರು.
ಕಲಬುರಗಿ ಅಭಿವೃದ್ಧಿಗೆ 500 ಕೋಟಿ:
ಜಿಲ್ಲೆಯ ಶಾಲಾ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣ, ಶಿಕ್ಷಕರ ನೇಮಕಾತಿ, ಸಿಸಿ ರಸ್ತೆ ನಿರ್ಮಾಣ, ಯುವಕರಿಗೆ ಉದ್ಯೋಗ ನೀಡುವುದು ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲೆಗೆ 500 ಕೋಟಿ ರೂ. ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಹೃದ್ರೋಗ ಕೇಂದ್ರಕ್ಕೆ ಹೆಚ್ಚಿನ ಶಕ್ತಿ:
ಈ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಸ್ಥಾಪಿಸಲಾಗಿದ್ದು, ಹೃದ್ರೋಗಿಗಳಿಗೆ ಅನುಕೂಲವಾಗಿದೆ. 150 ಕೋಟಿ ವೆಚ್ಚದಲ್ಲಿ ಜಯದೇವ ಆಸ್ಪತ್ರೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡುವುದಾಗಿ ಹೇಳಿದರು.
ಭೀಮಾ ನದಿಗೆ ಮಹಾರಾಷ್ಟ್ರ ನೀರು:
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ಮತ್ತು ಕೃಷ್ಣಾ ನದಿಗೆ ನೀರು ಹರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಹಲವು ಬಾರಿ ಪತ್ರ ಬರೆದು ಭೇಟಿಗೆ ಸಮಯ ಕೇಳಿದರೂ ಸಮಯ ಕೊಟ್ಟಿಲ್ಲ. ಸದ್ಯದಲ್ಲೇ ಬಗೆಹರಿಸಿ ಶಾಸ್ವತ ಪರಿಹಾರಕ್ಕಾಗಿ ತಲಾ 10 ಕಿ.ಮೀ ಗೆ ಒಂದರಂತೆ ಬ್ಯಾರೇಜ್ ನಿರ್ಮಾಣ ಮಾಡಿ ಬೇಸಿಗೆ ವೇಳೆ ನೀರು ಉಪಯೋಗಿಸಲು ಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಹೇಳಿದರು.
ಕೇಂದ್ರ ಸರ್ಕಾರ ಹಣ ಕೊಡ್ತಿಲ್ಲ:
ನರೇಗಾ ಕೆಲಸದ 2 ಸಾವಿರ ಕೋಟಿ ಹಣ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಕೇವಲ 9 ನೂರು ಕೋಟಿ ಮುಂಗಾರು ವೇಳೆಯ ಹಣ ನೀಡಲಾಗಿದೆ ಎಂದರು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಪ್ರಾದೇಶಿಕ ಆಯುಕ್ತ ಸುಭೋದ ಯಾದವ, ಐಜಿ ಮನೀಶ್ ಕರ್ಬೀಕರ್, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್, ಎಸ್ಪಿ ಯಡಾ ಮಾರ್ಟಿನ್, ಸಿಇಓ ಡಾ. ಪಿ ರಾಜಾ ಅವರೊಂದಿಗೆ ಸಿಎಂ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.