ಕಲಬುರಗಿ: ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತ ಸೇವಾಲಾಲ್ ಜಯಂತಿ ಮೆರವಣಿಗೆಯಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಘಟನೆಯಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರ ಇಬ್ಬರು ಬೆಂಬಲಿಗರಿಗೆ ಗಾಯಗಳಾಗಿವೆ.
ವಿವರ: ಸಂತ ಸೇವಾಲಾಲ್ ಜಯಂತಿ ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಯುವಕರು ಕುಣಿಯುತ್ತಿದ್ದರು. ಈ ವೇಳೆ ಮಣಿಕಂಠ ರಾಠೋಡ್ ಅವರನ್ನು ಬೆಂಬಲಿಗರು ಹೆಗಲ ಮೇಲೆ ಹೊತ್ತು ಕುಣಿಯುವಾಗ ಇನ್ನೊಂದು ಗುಂಪಿನ ಜನರು ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅನಿಲ್ ಹಾಗೂ ಶಾಂತಕುಮಾರ್ ಎಂಬವರ ತಲೆಗೆ ಕಲ್ಲೇಟು ಬಿದ್ದು ಗಾಯಗಳಾಗಿವೆ. ಇಬ್ಬರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಕಮಲಾಪುರ ಪಟ್ಟಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಮಣಿಕಂಠ ರಾಠೋಡ್ ಮಾತನಾಡಿ, "ಪ್ರಿಯಾಂಕ್ ಖರ್ಗೆ ಬೆಂಬಲಿಗರು ದಾಳಿ ನಡೆಸಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅದೃಷ್ಟವಶಾತ್ ನನಗೇನೂ ಆಗಿಲ್ಲ. ಘಟನೆಯಲ್ಲಿ ನಮ್ಮ ಇಬ್ಬರು ಬೆಂಬಲಿಗರಿಗೆ ಗಾಯಗಳಾಗಿವೆ. ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಅವರು ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ" ಎಂದರು.
ಇದನ್ನೂ ಓದಿ: 'ನನಗೂ ಒಂದು ಅವಕಾಶ ಕೊಡಿ': ಪ್ರಜಾಧ್ವನಿ ಯಾತ್ರೆಯಲ್ಲಿ ಸಿಎಂ ಬಯಕೆ ವ್ಯಕ್ತಪಡಿಸಿದ ಡಿಕೆಶಿ
ಬಿಜೆಪಿ ಸರ್ಕಾರದ ಅಕ್ರಮದ ಕುರಿತು ಚು. ಆಯೋಗಕ್ಕೆ ದೂರು: ಪ್ರಿಯಾಂಕ್ ಖರ್ಗೆ