ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಬಾಲಕಿ ಸಾವು ಪ್ರಕರಣ ಖಂಡಿಸಿ ಬಾಲಕಿ ಸಂಬಂಧಿಕರು ಹಾಗೂ ಗ್ರಾಮಸ್ಥರು ನಗರದ ಜಿಮ್ಸ್ ಆಸ್ಪತ್ರೆ ಎದುರು ಬಾಲಕಿಯ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಎಸ್ಪಿ ಕಚೇರಿಗೆ ಶವ ಒಯ್ಯಲು ಯತ್ನಿಸಿದಾಗ ಪೊಲೀಸರು ಆಸ್ಪತ್ರೆ ಬಳಿಯೇ ಪ್ರತಿಭಟನಾಕಾರರನ್ನು ಬ್ಯಾರಿಕೇಡ್ ಹಾಕಿ ತಡೆದರು. ರಾಜಕೀಯ ಕುಮ್ಮಕ್ಕಿನಿಂದ ಪೊಲೀಸ್ ಇನ್ಸ್ಪೆಕ್ಟರ್ ಮಹಿಳೆಯರು ಮತ್ತು ಮಕ್ಕಳನ್ನು ಬಂಧಿಸಿದ್ದಾರೆ. ಈ ವೇಳೆ ಠಾಣೆಯಲ್ಲಿ ಮಹಿಳೆಯನ್ನು ಥಳಿಸುವ ವೇಳೆ ಮಗುವಿಗೂ ಪೆಟ್ಟಾಗಿದೆ. ಪೊಲೀಸರು ಹೊಡೆದ ಪೆಟ್ಟಿನಿಂದಾಗಿಯೇ ಮಗು ಮೃತಪಟ್ಟಿದೆ. ಕೂಡಲೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಲಕಿಯ ಸಾವಿಗೆ ಪಿ.ಎಸ್.ಐ. ಹೂಗಾರ ಕಾರಣವಾಗಿದ್ದು, ಕೂಡಲೇ ನೌಕರಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಪಂ. ಚುನಾವಣೆ ನಂತರ ಜೇವರ್ಗಿ ಜೈನಾಪುರ ಗ್ರಾಮದಲ್ಲಿ ಗೆದ್ದ ಅಭ್ಯರ್ಥಿ ಕಡೆಯವರಿಂದ ಸೋತ ಅಭ್ಯರ್ಥಿ ಕಡೆಯವರ ಮೇಲೆ ಹಲ್ಲೆಯಾಗಿತ್ತು. ಹಲ್ಲೆ ಮಾಡಿದವರೇ ಮೊದಲು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರನ್ನು ಆಧರಿಸಿ ಸಂತೋಷ್ ಸೇರಿ ಆತನ ಕುಟುಂಬದ ಏಳು ಜನರನ್ನು ಬಂಧಿಸಿ, ಮಕ್ಕಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಅಜಯಸಿಂಗ್, ಪಿಎಸ್ಐ ಹೂಗಾರ್ರನ್ನು ಅಮಾನತು ಮಾಡಬೇಕು. ಘಟನೆಯಲ್ಲಿ ಪೊಲೀಸ್ ಇಲಾಖೆ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು, ಏನೂ ಅರಿಯದ ಮುಗ್ಧ ಬಾಲಕಿಯನ್ನು ಜೈಲಿಗೆ ಕಳುಹಿಸಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.