ಕಲಬುರಗಿ : ಧಾರ್ಮಿಕ ಗಲಭೆಗೆ ಕಾರಣವಾಗುತ್ತಿದ್ದ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಒಳ್ಳೆಯದು. ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದು ಒಬ್ಬರ ಆಹಾರ ಸಂಸ್ಕೃತಿಯನ್ನು ರಕ್ಷಿಸಿದಂತೆ ಆಗಲಿದೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಪರಿಚ್ಛೇದ 25ರ ಅಡಿ ಮತಾಂತರಗೊಳ್ಳುವುದು ಕಾನೂನು ಬದ್ಧವಾಗಿದೆ. ಅದು ಧಾರ್ಮಿಕ ಹಕ್ಕೂ ಆಗಿದೆ. ಆದಾಗ್ಯೂ, ಬಲವಂತದಿಂದ ಮತಾಂತರ ಮಾಡುವುದು ತಪ್ಪು. ತಮಗಿಷ್ಟ ಬಂದಂತಹ ಧರ್ಮವನ್ನು ಆಯ್ದುಕೊಳ್ಳುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಒಳ್ಳೆಯದು ಎಂದರು.
ಇನ್ನು ಗೋಹತ್ಯೆ ನಿಷೇಧ ಕಾಯ್ದೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ಚೇತನ್, ಇಡೀ ಜಗತ್ತಿನಲ್ಲಿ ಮಾಂಸ ರಫ್ತು ಮಾಡುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ವಿದೇಶಗಳಿಗೆ ಮಾಂಸ ರಫ್ತು ಮಾರಾಟ ಮಾಡುವ ನಿಟ್ಟಿನಲ್ಲಿ ಪ್ರಾಣಿಗಳ ಹತ್ಯೆ ನಿಲ್ಲಬೇಕು. ಆದ್ರೆ, ಕೆಲವೊಂದು ಸಮುದಾಯಗಳು ಮಾಂಸಾಹಾರ ಸೇವಿಸುವ ಆಹಾರ ಸಂಸ್ಕೃತಿಯನ್ನು ಹೊಂದಿವೆ. ಅಂತವರ ಆಹಾರಕ್ಕೆ ಕಡಿವಾಣ ಹಾಕೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸರ್ಕಾರ ಐದು ಭಾಗ್ಯಗಳನ್ನು ಜಾರಿ ಮಾಡಿ, ಕ್ರಾಂತಿ ಮಾಡಿದವರ ರೀತಿ ಮಾಡ್ತಿದ್ದಾರೆ. ಆದ್ರೆ, ಮಾಡಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ. ಸರ್ಕಾರ ಅಕ್ಕಿಯನ್ನು ಉಚಿತವಾಗಿ ನೀಡಬೇಕು. ಜೊತೆಗೆ, ಹೆಚ್ಚಿನ ಹಣವನ್ನು ಕೂಡ ಬಡವರಿಗೆ ನೀಡಬೇಕು. ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ಹಾಕಿ ಬಡವರಿಗೆ ನೀಡಬೇಕು. ಕರೆಂಟ್ ಬಿಲ್ ಹೆಚ್ಚು ಮಾಡಿ ಬಡವರಿಂದ ಕಿತ್ತು ಬಡವರಿಗೆ ನೀಡೋದನ್ನು ಬಿಡಬೇಕು. ಇಂತಹ ಗ್ಯಾರಂಟಿ ಯೋಜನೆಗಳು ಕೇವಲ ಸಣ್ಣಪುಟ್ಟ ಸಂಗತಿಗಳಿಗಾಗಿ ಜಾರಿ ಮಾಡಿರಬಹುದು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಒತ್ತು ನೀಡುವಂತಹ ಕೆಲಸ ಆಗಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವ ಬದಲು ನಮ್ಮ ರಾಜ್ಯದ ರೈತರಿಗೆ ಭತ್ತ ಬೆಳೆಯಲು ಉತ್ತೇಜನ ಕೊಟ್ಟು ಅವರಿಂದಲೇ ಖರೀದಿಸುವತ್ತ ಯೋಚನೆ ಮಾಡಬೇಕು. ಕಾರ್ಪೊರೇಟ್ ಕಂಪನಿಗಳ ಆಸ್ಪತ್ರೆಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ, ಅದರಿಂದ ಬಂದ ಹಣದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುನ್ನತ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂದರು.
ಇದನ್ನೂ ಓದಿ : 'ದಿ ಕೇರಳ ಸ್ಟೋರಿ' ಸಿನಿಮಾ ನಿಷೇಧಕ್ಕೆ ನಟ ಚೇತನ್ ಅಹಿಂಸಾ ವಿರೋಧ
ಮೌಡ್ಯಕ್ಕೆ ಒಳಗಾಗಿರುವ ದೇವದಾಸಿಯರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು, ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರವು ಕೂಡಲೇ ಪ್ರತ್ಯೇಕ ನಿರ್ದೇಶನಾಲಯದೊಂದಿಗೆ 2018ರ ದೇವದಾಸಿ ಪುನರ್ವಸತಿ ಕಾಯ್ದೆಯನ್ನು ಜಾರಿಗೆ ತರಬೇಕು. ದೇವದಾಸಿಯರ ಕುರಿತು ಮರು ಸರ್ವೆ ಮಾಡಬೇಕು ಮತ್ತು ದೇವದಾಸಿಯರಿಗೆ ಈಗಿರುವ ಒಂದೂವರೆ ಸಾವಿರ ರೂ.ಗಳ ಮಾಶಾಸನವನ್ನು 5000 ರೂ.ಗಳಿಗೆ ಹೆಚ್ಚಿಸಬೇಕು. ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವ ಮೂಲಕ ತುರ್ತು ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸರ್ಕಾರಿ ಉದ್ಯೋಗ ಒದಗಿಸುವುದು ಮತ್ತು ಭೂಮಿ ಮತ್ತು ಸೂರು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : 'ಪಿಎಫ್ಐ, ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ಪ್ರಯತ್ನವನ್ನು ವಿರೋಧಿಸುತ್ತೇನೆ': ನಟ ಚೇತನ್
ಇದೇ ವೇಳೆ ಗಾಂಧಿ, ನೆಹರೂ ಮೀಸಲಾತಿ ವಿರೋಧಿಗಳು ಎಂದು ಚೇತನ್ ಅಹಿಂಸಾ ಹೇಳಿದರು. ಮೀಸಲಾತಿಯ ಕೊಡುಗೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕೊಡುಗೆ ಶೂನ್ಯ. ಜ್ಯೋತಿಬಾ ಪುಲೆ, ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್, ಕೃಷ್ಣರಾಜ ಒಡೆಯರ್ ಅಂತವರು ಮಾತ್ರ ಮಿಸಲಾತಿಗೆ ನ್ಯಾಯ ಒದಗಿಸಿದವರು. ಆದರೆ, ಬಿಜೆಪಿ ಮಿಸಲಾತಿಯನ್ನು ಆರ್ಥಿಕತೆಯ ಆಧಾರದ ಮೇಲೆ ಹಂಚಿಕೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ನುಡಿದಂತೆ ನಡೆಯುವ ಸರ್ಕಾರ ಆಗಿದ್ದರೆ ಖಾಸಗಿ ವಲಯದಲ್ಲಿ ಮೀಸಲಾತಿ ತರುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.