ಕಲಬುರಗಿ: ಜಿಲ್ಲೆಯಾದ್ಯಂತ ನಾಗರಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಾಗರಪಂಚಮಿ ಸಂಭ್ರಮ ಮನೆಮಾಡಿತ್ತು. ಮಹಿಳೆಯರು ಕಲ್ಲಿನ ನಾಗರಕ್ಕೆ ಹಾಲೆರೆದು ಭಕ್ತಿಯಿಂದ ಪ್ರಾರ್ಥಿಸಿ ನೈವೇದ್ಯ ಸಮರ್ಪಿಸಿದರು. ಇದೇ ವೇಳೆ ಕೆಲವೆಡೆ ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಲಾಯಿತು. ಎಳ್ಳಿನ ಉಂಡೆ, ಅಕ್ಕಿ ಉಂಡೆ, ಪಾಯಸ, ಕಡುಬು ಇತ್ಯಾದಿಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.
ಶ್ರಾವಣ ಮಾಸದ ಮೊದಲ ಸೋಮವಾರದಂದು ನಾಗರ ಪಂಚಮಿ ಬಂದಿದ್ದು, ಒಳ್ಳೆಯ ಮಳೆಯಾಗಿ ಉತ್ತಮ ಬೆಳೆಯಾಗಲಿ. ಎಲ್ಲರಿಗೂ ಸುಖ-ಸಮೃದ್ಧಿ ಸಿಗಲಿ ಎಂದು ನಾಗ ದೇವತೆಯಲ್ಲಿ ಪ್ರಾರ್ಥಿಸಿದರು.