ಸೇಡಂ: ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮತ್ತು ಸಂಸದ ಡಾ. ಉಮೇಶ್ ಜಾಧವ್ ಕುಮ್ಮಕ್ಕಿನಿಂದಲೇ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಪಿತೂರಿ ನಡೆಸಿ ನಮ್ಮ ಮೇಲೆ ಕಾನೂನು ಉಲ್ಲಂಘನೆ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ತಾಲೂಕಿನೆಲ್ಲೆಡೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಲ್ಲಿ ಶಾಸಕರ ನೇರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು. ಶಾಸಕ ಸರ್ಕಾರಕ್ಕಲ್ಲ, ಕೇವಲ ಶಾಸಕಾಂಗಕ್ಕಷ್ಟೇ ಸೀಮಿತ ಎಂಬುದನ್ನು ಅರಿಯಬೇಕು. ಮೊನ್ನೆ ಮೊನ್ನೆ ಶಾಸಕರಾದವರು ಕಾನೂನಿನ ಟ್ಯೂಷನ್ ಪಡೆಯಬೇಕು. ಈ ಬಗ್ಗೆ ಡಿಪಿಆರ್ ಗೆ ಪತ್ರ ಬರೆದರೇ ಅವರೇ ಶಾಸಕರ ಇತಿಮಿತಿಗಳ ಬಗ್ಗೆ ತಿಳಿಸುತ್ತಾರೆ ಎಂದರು.
ಸುಲೇಪೆಟ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ತಹಶೀಲ್ದಾರ ಮೇಲೆ ರಾಜಕೀಯ ಪ್ರಭಾವ ಬಳಸಿದ್ದು, ಸಾಬೀತಾಗಿದೆ. ಫೋನ್ ರಿಸೀವ್ ಮಾಡದ ಶಾಸಕರ ನಡೆಯಿಂದ ಬೇಸತ್ತು ಜನ ನಮಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ನಾನು ಅಲ್ಲಿಗೆ ತೆರಳಿ ಪರಿಶೀಲಿಸುವಾಗ ಸಾಮಾನ್ಯವಾಗಿ ಜನ ಸೇರಿದ್ದಾರೆ. ಆದರೂ ಸಹ ಸಾಮಾಜಿಕ ಅಂತರ ಕಾಪಾಡಲು ಕೋರಿದ್ದೆವು. ಅಲ್ಲಿ ಯಾವುದೇ ರಾಜಕೀಯ ಸಭೆ ನಡೆಸಿಲ್ಲ. ಇಂತಹ ದೂರುಗಳಿಗೆಲ್ಲ ನಾವು ಹೆದರಲ್ಲ ಎಂದು ಗುಡುಗಿದರು.
ಇನ್ನು ಕ್ಷೇತ್ರದ ಅನೇಕ ಕಟ್ಟಡ ಕಾರ್ಮಿಕರಿಗೆ ಇನ್ನೂ ಸಹ ಸರ್ಕಾರದ ಹಣ ತಲುಪಿಲ್ಲ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಉದ್ಯೋಗ ಖಾತ್ರಿಯಡಿ ಮಷಿನ್ ಬಳಕೆಗೆ ಅನುಮತಿ ಇಲ್ಲ. ಆದರೂ ಸಹ ಕೆಲವೆಡೆ ಜೆಸಿಬಿ ಬಳಸಲಾಗುತ್ತಿದೆ. ಈ ರೀತಿಯ ಸಾಮಾನ್ಯ ಜ್ಞಾನವೂ ಶಾಸಕರಿಗಿಲ್ಲ ಎಂದು ಟೀಕಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ವೀಕ್ಷಣೆ ಬಿಟ್ಟರೆ ಬೇರೆಲ್ಲೂ ಶಾಸಕ ರಾಜಕುಮಾರ ಪಾಟೀಲ್ ತೆರಳಿಲ್ಲ. ಜನರ ಸಮಸ್ಯೆ ಆಲಿಸಿಲ್ಲ. ಉದ್ಯೋಗ ಖಾತ್ರಿ ಯುಪಿಎ ಕೊಡುಗೆ. ಇದೇ ಉದ್ಯೋಗ ಖಾತ್ರಿ ಯೋಜನೆಯ ಜಾರಿ ವೇಳೆ ಮೋದಿ ಅಪಹಾಸ್ಯ ಮಾಡಿದ್ದರು. ಈಗ ಅದಕ್ಕಾಗಿ ವಿಶೇಷ ಬಜೆಟ್ ಮಂಡಿಸುತ್ತಾರೆ. ಅಂದು ಕಾಂಗ್ರೆಸ್ ಆಹಾರ ಭದ್ರತೆ ಕಾಯ್ದೆ ತಂದ ಪರಿಣಾಮ ಇಂದು ಜನರಿಗೆ 10ಕೆಜಿ ಅಕ್ಕಿ ದೊರೆಯುತ್ತಿದೆ. ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಹಳೆಯ ಬಜೆಟನ ಹೊಸ ರೂಪವಾಗಿದೆ. ಇದರಿಂದ ಬಡವರಿಗೆ ನಯಾಪೈಸೆ ಲಾಭವಿಲ್ಲ. ಇದೆಲ್ಲ ಜನರ ಗಮನ ಸೆಳೆಯುವ ಕೆಲಸ. ಇದರಿಂದ ಬಡವರಿಗೆ ಉಪಯೋಗ ಆಗಲ್ಲ ಎಂದರು.
ಆಟೋ ಚಾಲಕರಿಗೆ ಅನುದಾನ, ಸವಿತಾ ಸಮಾಜಕ್ಕೆ ಆರ್ಥಿಕ ಸಹಾಯ ಸ್ವಾಗತಾರ್ಹ. ಆದರೆ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಬಡಿಗರು, ಅಕ್ಕಸಾಲಿಗರು, ಸಮಗಾರ, ಟೈಲರ್ ಹಾಗೂ ಇನ್ನುಳಿದ ಬಡ ಕೆಲಸಗಾರರಿಗೆ ಸಹಾಯ ಮಾಡಬೇಕು. ಹಣ್ಣು ತರಕಾರಿ ಬೆಳೆಗಾರರಿಗೆ 25 ಸಾವಿರ ರೂ. ಕೊಡಬೇಕು. ತೊಗರಿ ಬೆಳೆದವರಿಗೂ ಕೊಡಬೇಕು. ಜನಪರ ಕೆಲಸ ಮಾಡಿದರೆ ಮಾತ್ರ ನಾವು ಸ್ವಾಗತಿಸುತ್ತೇವೆ ಎಂದರು.