ಕಲಬುರಗಿ: ನೂರಕ್ಕೂ ಹೆಚ್ಚು ಕ್ಷೇತ್ರಗಳ ವಿಜಯ ಸಂಕಲ್ಪಯಾತ್ರೆ ನಡೆದಿದೆ. ಯಾತ್ರೆಗೆ ಜನರ ಬೆಂಬಲ ನೋಡಿದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎನ್ನುವ ಭರವಸೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೆ ತಿಂಗಳು 25 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈಗಾಗಲೇ ಕೋರ್ ಕಮೀಟಿ ಸಭೆ ನಡೆಸಿ ಆಕಾಂಕ್ಷಿಗಳ ಪಟ್ಟಿ ಪಡೆಯಲಾಗಿದೆ, ಚುನಾವಣೆಯಲ್ಲಿ ಗೆಲ್ಲಲು ಅವರ ಸಲಹೆಯನ್ನು ಸಹ ಪಡೆಯಲಾಗಿದೆ ಎಂದು ಇದೇ ವೇಳೆ ಸಿಟಿ ರವಿ ಹೇಳಿದರು.
ಮೂಲ ಸೌಕರ್ಯಗಳನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ನೀಡಿದೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಮೂಲ ಸೌಕರ್ಯಗಳನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ನೀಡಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಬಿಜೆಪಿ ಸರ್ಕಾರ ಘೋಷನೆ ಮಾಡಿದ ವಿಷಯಗಳು ಮಾತ್ರವಲ್ಲ, ಘೋಷಣೆ ಮಾಡದ ಕೆಲಸವನ್ನು ಕೂಡಾ ಮಾಡಿದ್ದೇವೆ. ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಘೋಷಣೆ ಮಾಡಿಲ್ಲ ಆದರೂ ಹೆಚ್ಚಳ ಮಾಡಿದ್ದೇವೆ. ಲಂಬಾಣಿ ತಾಂಡಾಗಳಿಗೆ ಕಂದಾಯ ಗ್ರಾಮ ಮಾಡುತ್ತೇವೆ ಎಂದು ಹೇಳಿರಲಿಲ್ಲ ಆದರೂ ಹಕ್ಕು ಪತ್ರ ನೀಡಿದ್ದೇವೆ. ಅನುಭವ ಮಂಟಪ ಪುನರುತ್ಥಾನದ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ ಆದರೂ ಆ ಕೆಲಸವನ್ನೂ ನಮ್ಮ ಸರ್ಕಾರ ಮಾಡಿದೆ ಎಂದು ಸಿಟಿ ರವಿ ಹೇಳಿದರು.
ರಿಪೋರ್ಟ್ ಕಾರ್ಡ್ ಇಟ್ಟು ಚುನಾವಣೆಯಲ್ಲಿ ಮತ ಕೇಳುತ್ತೇವೆ: ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಅಥವಾ ಸಿದ್ದರಾಮಯ್ಯಗೆ ಇಲ್ಲ, ನಮ್ಮ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಇಟ್ಟು ಚುನಾವಣೆಯಲ್ಲಿ ಮತ ಕೇಳುತ್ತೇವೆ. ರಾಜ್ಯ ಪ್ರತಿ ಜಿಲ್ಲೆಯಲ್ಲಿ ಶೇ80 ರಷ್ಟು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನ ಪಡೆದ ಫಲಾನುಭವಿಗಳಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ಗೆ ಆದ್ಯತೆ ಕೊಟ್ಟು ನಾವು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿ ಟಿ ರವಿ, ನಿವೃತ್ತ ನ್ಯಾ. ಕೆಂಪಣ್ಣ ಆಯೋಗದಲ್ಲಿ 8 ಸಾವಿರ ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ ಅಂತಾ ಹೇಳಿದೆ. ನೀವು ಮಾಡಿರಬಹುದು ಅಥವಾ ನಿಮ್ಮವರೇ ಆದ ಜಾರ್ಜ್ ಮಾಡಿರಬಹುದು, ಕೆಂಪಣ್ಣ ಆಯೋಗದ ವರದಿ ಬಗ್ಗೆ ಯಾಕೆ ಮೌನವಹಿಸಿದ್ದಿರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನೆ ಮಾಡಿದರು. ಪ್ರಾಮಾಣಿಕರಾಗಿದ್ದರೆ ಲೋಕಾಯುಕ್ತ ಯಾಕೆ ಮುಚ್ಚಿ ಹಾಕಿದಿರಿ? ತಮ್ಮ ಮೇಲಿನ ಹಗರಣಗಳನ್ನ ಮುಚ್ಚಿ ಹಾಕಲು ಎಸಿಬಿಯನ್ನ ಹುಟ್ಟು ಹಾಕಿದರು ನೀವು ಎಂದು ಅವರು ಟೀಕಿಸಿದರು.
ಇದನ್ನೂ ಓದಿ:ಅಧಿಕಾರಕ್ಕಾಗಿ ಅಲ್ಲ, ಜನಕಲ್ಯಾಣಕ್ಕಾಗಿ ರಾಜಕಾರಣ ಮಾಡುವೆ: ಸಿಎಂ ಬೊಮ್ಮಾಯಿ