ಕಲಬುರಗಿ/ಬೀದರ್: ಮನೆ ಕಳ್ಳತನ, ಸರಗಳ್ಳತನ, ವಾಹನ ಕಳ್ಳತನ ಕೇಸ್ಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಳ್ಳ, ಸರ್ಕಾರಿ ಬಸ್ ಅನ್ನೇ ಕದ್ದೊಯ್ದಿದ್ದಾನೆ. ಕಲಬುರಗಿಯ ಚಿಂಚೋಳಿ ಬಸ್ ನಿಲ್ದಾಣಕ್ಕೆ ಬೆಳಗಿನ ಜಾವ ಲಗ್ಗೆ ಇಟ್ಟಿರೋ ಖದೀಮ ಕೆಎಸ್ಆರ್ಟಿಸಿ ಬಸ್ ಕದ್ದು ಎಸ್ಕೇಪ್ ಆಗಿದ್ದಾನೆ.
ಇಂದು ಬೆಳಗಿನ ಜಾವ ಸುಮಾರು 3:30ರ ವೇಳೆಗೆ ಬಸ್ ನಿಲ್ದಾಣಕ್ಕೆ ಏಂಟ್ರಿಕೊಟ್ಟಿರೋ ಖದೀಮ, ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆ ನಿಗಮಕ್ಕೆ ಸೇರಿದ ಸಾರಿಗೆ ಬಸ್ ಅನ್ನೇ ಕಳ್ಳತನ ಮಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೀದರ್ ಬಸ್ ಡಿಪೋ ನಂಬರ್-2ಗೆ ಸೇರಿದ KA-38 F-971 ನೋಂದಣಿಯ ಸಾರಿಗೆ ಬಸ್ ಅನ್ನು ಸ್ಟಾರ್ಟ್ ಮಾಡಿಕೊಂಡು ಕದ್ದೊಯ್ದಿದ್ದಾನೆ. ಕಳ್ಳನ ಕೈ ಚಳಕದ ದೃಶ್ಯ ಬಸ್ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿನ್ನೆ ಬೀದರ್ನಿಂದ ಚಿಂಚೋಳಿಗೆ ಆಗಮಿಸಿರೋ ಸಾರಿಗೆ ಬಸ್ ಅನ್ನು ನೈಟ್ ಹಾಲ್ಟ್ ನಿಮಿತ್ತ ಚಾಲಕ ರಾತ್ರಿ 9:15 ಕ್ಕೆ ನಿಲ್ದಾಣದಲ್ಲಿ ನಿಲ್ಲಿಸಿದ್ದಾರೆ. ಬೆಳಗಿನ ಜಾವ ಎಂಟ್ರಿಕೊಟ್ಟಿರೋ ಖದೀಮ ಬಸ್ ಕದ್ದೊಯ್ದಿದ್ದಾನೆ. ಬೆಳಗ್ಗೆ ಚಾಲಕ ನೋಡಿದಾಗ ಬಸ್ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಮಿರಿಯಾಣ ಮಾರ್ಗವಾಗಿ ತಾಂಡೂರ್ ಮೂಲಕ ತೆಲಂಗಾಣದ ಕಡೆ ಬಸ್ ತೆಗೆದುಕೊಂಡು ಹೊಗಿರೋದು ಕಂಡು ಬಂದಿದೆ. ಬಸ್ ಕಳ್ಳತನದ ಬಗ್ಗೆ ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಸ್ಥಳ, ಸಿಸಿ ಟಿವಿ ಪರಿಶೀಲನೆ ನಡೆಸಿರುವ ಚಿಂಚೋಳಿ ಠಾಣೆ ಪೊಲೀಸರು, ಬಸ್ ಪತ್ತೆಗಾಗಿ ಎರಡು ತಂಡಗಳನ್ನ ರಚಿಸಿ ಹುಡುಕಾಟ ನಡೆಸ್ತಿದ್ದಾರೆ.
ಇತ್ತ ಕೆಕೆಆರ್‌ಟಿಸಿ ಅಧಿಕಾರಿಗಳು ಕೂಡ ಬೀದರ್ನ ಎರಡು ತಂಡ ಮತ್ತು ಕಲಬುರಗಿಯ ಎರಡು ತಂಡಗಳನ್ನು ರಚಿಸಿಕೊಂಡು ಚಿಂಚೋಳಿ, ತಾಂಡೂರ್ ಮತ್ತ ತೆಲಂಗಾಣ ಭಾಗದಲ್ಲಿ ಬಸ್ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಅಂದಹಾಗೆ ಕಲಬುರಗಿ ಜಿಲ್ಲೆಯಲ್ಲಿ ಈ ಹಿಂದೆ 1993-94 ರಲ್ಲೂ ಕೂಡ ಬಸ್ ಕಳ್ಳತನ ಆಗಿರೋ ಉದಾಹರಣೆ ಇದೆ. ಕಳ್ಳನೋ ಅಥವಾ ಇಲಾಖೆಯ ಸಿಬ್ಬಂದಿ ಯಾರಾದರೂ ಬಸ್ ತೆಗೆದುಕೊಂಡು ಹೋಗಿರಬಹುದು ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.
ಮುಂಜಾನೆ 3:30 ಹೊತ್ತಿಗೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಚಿಂಚೋಳಿ ಪೊಲೀಸರಿಗೆ ದೂರು ನೀಡಿದ್ದು, ಜಿಲ್ಲಾ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಬೀದರ್ ಮತ್ತು ಕಲಬುರಗಿಯಿಂದ ನಾಲ್ಕು ತಂಡ ರಚಿಸಿ ಹುಡುಕಾಟ ಆರಂಭವಾಗಿದೆ. ಸದ್ಯದ ತೆಲಂಗಾಣ ರಾಜ್ಯದಲ್ಲಿಯೇ ಬಸ್ ಇರುವುದು ಬಹುತೇಕ ಖಚಿತಗೊಂಡಿದೆ. ತೀವ್ರ ಹುಡುಕಾಟ ನಡೆದಿದ್ದು, ಶೀಘ್ರವೇ ಬಸ್ ಸಿಗಲಿದೆ ಎಂದು ಕೆಕೆಆರ್‌ಟಿಸಿ ಎಂಡಿ ರಾಚಪ್ಪ ತಿಳಿಸಿದ್ದಾರೆ.
ಒಟ್ನಲ್ಲಿ ಮನೆ ಕಳವು, ಸರಗಳ್ಳ, ಅಂಗಡಿ ಕಳ್ಳತನ, ವಾಹನಗಳ ಕಳವು ಕೇಸ್ ನೋಡಿದ್ದ ಜನರಿಗೆ ಬಸ್ ಕಳ್ಳತನ ಆಗಿರೋ ಪ್ರಕರಣ ಆಶ್ಚರ್ಯ ಉಂಟು ಮಾಡಿದೆ. ಅದೇನೇ ಇದ್ದರು ಬಸ್ ಪತ್ತೆಯಾದ ನಂತರವಷ್ಟೇ ಬಸ್ ಕಳ್ಳತನದ ಅಸಲಿ ಕಹಾನಿ ಬೆಳಕಿಗೆ ಬರಲಿದೆ.
ಇದನ್ನೂ ಓದಿ: ವಿಮಾನ ತಪ್ಪುವುದನ್ನು ತಡೆಯಲು ಬಾಂಬ್ ಕರೆ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ: ಹೈದರಾಬಾದ್ ನಿಲ್ದಾಣದಲ್ಲಿ ಆತಂಕ