ಕಲಬುರಗಿ : ಸಿದ್ದರಾಮಯ್ಯ ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಇರೋದು ಕನ್ಫರ್ಮ್ ಆಗಿದೆ. ಹೀಗಾಗಿ, ಭವಿಷ್ಯ ನುಡಿಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಅವಧಿಪೂರ್ಣ ಮಾಡೋದಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಾವು ವಿರೋಧ ಪಕ್ಷದಲ್ಲಿ ಇರುವುದು ಖಚಿತವಾಗಿದೆ. ಹೀಗಾಗಿ, ಭವಿಷ್ಯ ನುಡಿಯುತ್ತಾರೆ ಎಂದು ತೀರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ 77ವರ್ಷ ಆಗಿರೋದ್ರಿಂದ ಬಿಟ್ಟು ಕೊಡ್ತೇನೆ ಅಂತಾ ಹೇಳಿದ್ದಾರೆ. ಅವರು ಸ್ವ-ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಯಡಿಯೂರಪ್ಪ ಖುಷಿಯಿಂದ ಕಣ್ಣೀರು ಬಂದಿದೆ ಅಂತಾ ಸ್ವತಃ ತಾವೇ ಹೇಳಿದ್ದಾರೆ.
ಪಕ್ಷದ ತತ್ವ, ಸಿದ್ಧಾಂತಗಳ ಪ್ರಕಾರ 75 ವರ್ಷ ಮೀರಿದವರಿಗೆ ಅಧಿಕಾರ ಕೊಟ್ಟಿರಲಿಲ್ಲ. ಆದ್ರೆ, ಯಡಿಯೂರಪ್ಪನವರಿಗೆ ಎರಡು ವರ್ಷ ಅಧಿಕಾರ ಮಾಡೋಕೆ ಅವಕಾಶ ಕೊಟ್ಟಿದ್ದಾರೆ ಎಂದು ಕಟೀಲ್ ಹೇಳಿದರು.
ಕಾಂಗ್ರೇಸ್ ವಿರೋಧ ಪಕ್ಷದಲ್ಲಿರಲೂ ನಾಲಾಯಕ್ : ಏಳು ವರ್ಷದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅನುಷ್ಠಾನಗೊಂಡಿವೆ. ಭ್ರಷ್ಟಾಚಾರ ರಹಿತ ಆಡಳಿತವನ್ನ ನರೇಂದ್ರ ಮೋದಿ ಕೊಟ್ಟಿದ್ದಾರೆ. ಮೋದಿ ಗ್ರಾಮೀಣ ಭಾಗಕ್ಕೆ ಹೆಚ್ಚು ಆದ್ಯತೆ ಕೊಟ್ಟಿರುವುದು ಗಮನಾರ್ಹ ಸಂಗತಿ. 60 ಕೋಟಿ ಜನರಿಗೆ ಉಚಿತ ಕೋವಿಡ್ ಲಸಿಕೆ ಕೊಡಲಾಗಿದೆ. ಹೀಗಾಗಿ, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಿಗೆ ಚರ್ಚೆ ಮಾಡಲು ನೈಜ ವಿಷಯಗಳಿಲ್ಲ.
ವಿರೋಧ ಪಕ್ಷಕ್ಕೂ ನಾಲಾಯಕ್ ಅಂತಾ ಕಾಂಗ್ರೆಸ್ಗೆ ಜನ ತಿರಸ್ಕಾರ ಮಾಡಿದ್ದಾರೆ. ಪ್ರತಿ ವಿಚಾರಕ್ಕೂ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಲೋಕಸಭಾ ಅಧಿವೇಶನದಲ್ಲೂ ಚರ್ಚೆ ಮಾಡಲು ಕಾಂಗ್ರೆಸ್ ಬಿಡಲಿಲ್ಲ. ಲೋಕಸಭಾ ಅಧಿವೇಶನ ಸಂಪೂರ್ಣ ಹಾಳು ಮಾಡಿ, ದೇಶದ ಜನರಿಗೆ ಮೋಸ ಮಾಡಿದೆ. ಬರೀ ವಿರೋಧ ಮಾಡೋದೆ ಕಾಂಗ್ರೆಸ್ ಕಾಯಕವಾಗಿದೆ ಎಂದು ಕಾಂಗ್ರೇಸ್ ವಿರುದ್ಧ ಹರಿಹಾಯ್ದರು.
ಬೊಮ್ಮಾಯಿ ಅವರದು ಉತ್ತಮ ಆಡಳಿತ : ಕೋವಿಡ್ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಬಹಳ ಒಳ್ಳೆಯ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದರು.
3 ಪಾಲಿಕೆಯಲ್ಲಿ ಬಿಜೆಪಿ ಬಹುಮತದ ವಿಶ್ವಾಸ : ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಈಗಾಗಲೇ ಚುನಾವಣೆ ಘೋಷಣೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಹ ಪ್ರಾರಂಭವಾಗಿದೆ. ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ.
ಕಲಬುರಗಿಯಲ್ಲೂ ಈ ಬಾರಿ ಬಿಜೆಪಿ ಗೆಲುವು ಸಾಧಿಸುತ್ತದೆ. ಪಕ್ಷ ನಿಷ್ಠರಿಗೆ, ಅರ್ಹತೆಯ ಆಧಾರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನಾಳೆ, ನಾಡಿದ್ದು ಮೊದಲನೇ ಹಂತದ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೋವಿಡ್ ನಿಯಂತ್ರಣಕ್ಕೆ ಕ್ರಮ: ಸಿಎಂ ಭರವಸೆ