ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬ ಸಾಫ್ (ಹತ್ಯೆ) ಮಾಡುತ್ತೇನೆ ಎಂದು ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು ಕಲಬುರಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಕಲಿ ಆಡಿಯೋ ಸೃಷ್ಟಿಸಿ ನನ್ನ ವಿರುದ್ಧ ಕಾಂಗ್ರೆಸ್‌ನವರು ಸುಳ್ಳು ಆರೋಪ ಮಾಡಿದ್ದಾರೆ. ಆಡಿಯೋದಲ್ಲಿರುವ ಧ್ವನಿ ತಮ್ಮದಲ್ಲ ಎಂದು ರಾಠೋಡ್ ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ.
ಮಣಿಕಂಠ ರಾಠೋಡ್ ಹಾಗೂ ಬಿಜೆಪಿ ಕಾರ್ಯಕರ್ತನ ನಡುವೆ ನಡೆದ ಸಂಭಾಷಣೆ ಎನ್ನಲಾದ ಆಡಿಯೋದಲ್ಲಿ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಕೊಲೆಯ ಬೇದರಿಕೆ ಹಾಕಲಾಗಿದೆ. ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೊಂದೆಡೆ ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ಸುರ್ಜೇವಾಲ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ನಡೆಸಿ ಆಡಿಯೋ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿ ತನ್ನ ಅಭ್ಯರ್ಥಿ ಮಣಿಕಂಠ ರಾಠೋಡ್ ಮೂಲಕ ಖರ್ಗೆ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ. ಖರ್ಗೆ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೇನೆ ಎಂಬ ಸಂಭಾಷಣೆಯಿದೆ. ಬಿಜೆಪಿಯವರು ಖರ್ಗೆಯವರ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಕಿಡಿಕಾರಿದಿದ್ದರು. ಪ್ರಿಯಾಂಕ್ ಖರ್ಗೆ ಕೂಡಾ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ನಮ್ಮ ತಂದೆ ಮತ್ತು ಕುಟುಂಬದವರನ್ನು ಹತ್ಯೆ ಮಾಡುವಂತ ಮಾಡಿರುವ ತಪ್ಪೇನಿದೆ ಹೇಳಿ ಎಂದಿದ್ದರು.
ಹತ್ಯೆ ವಿಚಾರವಾಗಿ ವಿಡಿಯೋ ವೈರಲ್ ಬೆನ್ನಲ್ಲೇ ಮಣಿಕಂಠ ರಾಠೋಡ್ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ, ರವಿ ರೆಡ್ಡಿ ಮತ್ತು ಕಾಂಗ್ರೆಸ್ ಫೇಸ್ಬುಕ್ ಪೇಜ್ ವಿರುದ್ಧ ದೂರು ಸಲ್ಲಿಸಿ ತನಿಖೆಗೆ ಮನವಿ ಮಾಡಿದ್ದಾರೆ. ಇದೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾರಿಗೂ ಧಮ್ಕಿ ಹಾಕಿಲ್ಲ ಆಡಿಯೋ ನನ್ನದಲ್ಲ. ಸೋಲಿನ ಭೀತಿಯಿಂದ ಏನೇನ್ ಮಾಡ್ತಾ ಇದಾರೆ ಅನ್ನೋದು ಅವ್ರಿಗೇ ಗೊತ್ತಾಗ್ತಾ ಇಲ್ಲ, ರಾಜಕೀಯ ಹಿನ್ನೆಲೆನೇ ಇಲ್ಲದ 26 ವರ್ಷದ ಸಾಮಾನ್ಯ ಯುವಕ ಗೆಲ್ಲುತ್ತಿದ್ದಾನೆ. ಖರ್ಗೆ ಅವರ ತವರು ಜಿಲ್ಲೆ, ಮೇಲಾಗಿ ಖರ್ಗೆ ಪುತ್ರನ ಎದುರು ಗೆದ್ದರೆ ಮರ್ಯಾದೆ ಹರಾಜು ಆಗುತ್ತೆ ಅನ್ನೋ ಭಯದಲ್ಲಿ ಕಾಂಗ್ರೆಸ್‌ನವರು ಸಲ್ಲದ ಆರೋಪ ಮಾಡ್ತಿದ್ದಾರೆಂದು ತಿರುಗೇಟು ಕೊಟ್ಟರು.
ಸೋಲಿನ ಭೀತಿಯಿಂದ ಖರ್ಗೆ ಕುಟುಂಬ ಕೀಳು ಮಟ್ಟದ ರಾಜಕೀಯ ಮಾಡ್ತಾ ಇದೆ. ನನ್ನ ಮಗ ಯಾವುದಕ್ಕೂ ಹೆದರಲ್ಲ ಅಂತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಸಹ ಹೇಳಿದ್ದಾರೆ. ಶನಿವಾರ ಫೇಕ್ ಆಡಿಯೋ ರಿಲೀಸ್ ಮಾಡಿದ್ದಾರೆ. ನಾನು ಕೂಡ ಯಾವುದಕ್ಕೂ ಹೆದರಲ್ಲ, ಈ ಹಿಂದೆ ಕೂಡಾ ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದರು. ನಮ್ಮ ಕ್ಷೇತ್ರದ ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ಆಡಿಯೋ ಬಗ್ಗೆ ಸೈಬರ್ ಕ್ರೈಂನಲ್ಲಿ ದೂರು ನೀಡಿದ್ದೇನೆ. ತನಿಖೆ ಆಗಲಿ ನಿಜಾಂಶ ಹೊರಬರುತ್ತೆ. ತಪ್ಪಿತಸ್ಥರು ಯಾರು ಏನ್ನುವುದು ಗೊತ್ತಾಗಲಿದೆ ಎಂದು ರಾಠೋಡ್ ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಹಾಗೂ ಮಣಿಕಂಠ ರಾಥೋಡ್ ವಿರುದ್ಧ ಕಾಂಗ್ರೆಸ್ ದೂರು