ಕಲಬುರಗಿ : ಚಿಂಚೋಳಿ ತಾಲೂಕಿನ ಐನೊಳ್ಳಿ ಗ್ರಾಮ ಪಂಚಾಯತಿ ಸದಸ್ಯರ ಕಿಡ್ನಾಪ್ ರಾಜಕೀಯದ ನಡುವೆ ಇಂದು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳಿಗೆ ಚುನಾವಣೆ ನಡೆದು ಬಿಜೆಪಿ ಗೆಲುವು ಸಾಧಿಸಿತು. ಬಿಜೆಪಿ ಬೆಂಬಲಿತ ಕಮಲಿಬಾಯಿ ಪವಾರ ಅಧ್ಯಕ್ಷರಾಗಿಯೂ, ಸುಕಿರ್ತಾ ಗಾರಂಪಳ್ಳಿಕರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.
ಐನೋಳ್ಳಿ ಗ್ರಾ.ಪಂಚಾಯತಿಗೆ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಕಿಡ್ನಾಪ್ ರಾಜಕೀಯ ನಡೆದಿತ್ತು. ಚುನಾವಣೆಯ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದ ಬಿಜೆಪಿ ಬೆಂಬಲಿತ 6 ಜನ ಸದಸ್ಯರನ್ನು ಮಹಾರಾಷ್ಟ್ರದ ಪುಣೆ ನಗರದ ಖಾಸಗಿ ಲಾಡ್ಜ್‌ನಿಂದಲೇ ಅಪಹರಣಕಾರರು ಇದೇ ತಿಂಗಳ 4ರಂದು ಕಿಡ್ನಾಪ್ ಮಾಡಿದ್ದರು. ಅಪಹರಣದ ದೃಶ್ಯ ಲಾಡ್ಜ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇಬ್ಬರನ್ನು ಮಾರ್ಗಮಧ್ಯೆ ಬಿಟ್ಟು ಇನ್ನುಳಿದ ನಾಲ್ವರನ್ನು ಕಿಡ್ನಾಪ್ ಮಾಡಲಾಗಿತ್ತು. ಪುಣೆ ನಗರದ ಚಿಕ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಸಿನಿಮಾ ಸ್ಟೈಲ್ನಲ್ಲಿ ಹೋಟೆಲ್ಗೆ ನುಗ್ಗಿ ಗ್ರಾ.ಪಂ ಸದಸ್ಯರ ಅಪರಹಣ ಆರೋಪ: ಜಿಲ್ಲಾ ಬಿಜೆಪಿಯಿಂದ ಖಂಡನೆ
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಬೆದರಿದ ಆರೋಪಿಗಳು, ಅಪಹರಿಸಿದ್ದ ನಾಲ್ವರು ಸದಸ್ಯರನ್ನು ನಿನ್ನೆ ಕಲಬುರಗಿ ಹೊರವಲಯದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರ ಕಿಡ್ನಾಪ್ ಪ್ರಕರಣದ ಹಿಂದೆ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ. ಪ್ರಕರಣವನ್ನು ಸೂಕ್ತ ತನಿಖೆ ನಡೆಸುವಂತೆ ಬಿಜೆಪಿಯ ಕಲಬುರಗಿ ಸಂಸದ ಉಮೇಶ್ ಜಾಧವ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಆಗ್ರಹಿಸಿದ್ದಾರೆ.
ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಐನೋಳ್ಳಿ ಗ್ರಾಮ ಪಂಚಾಯತಿಯಲ್ಲಿ 18 ಸದಸ್ಯ ಬಲವಿದ್ದು, 11 ಬಿಜೆಪಿ ಬೆಂಬಲಿತ ಸದಸ್ಯರಿದ್ದು, 7 ಕಾಂಗ್ರೆಸ್ ಸದಸ್ಯರಿದ್ದಾರೆ. ಗ್ರಾಮ ಪಂಚಾಯತಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿತ್ತು. ಕಿಡ್ನಾಪ್ ಆದ ನಾಲ್ವರೂ ಸಹ ಇಂದು ಆಗಮಿಸಿ ಮತ ಚಲಾಯಿಸಿದ್ದು, ಬಿಜೆಪಿ ಜಯಗಳಿಸಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಉಮೇಶ ಜಾಧವ ಸಹೋದರ ರಾಮಚಂದ್ರ ಜಾಧವ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಇದನ್ನೂ ಓದಿ : ಗ್ರಾಪಂ ಸದಸ್ಯೆಯ ಕಿಡ್ನ್ಯಾಪ್ ಯತ್ನ ಆರೋಪ.. ದೂರು, ಪ್ರತಿ ದೂರು ದಾಖಲು!