ಕಲಬುರಗಿ: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಟಕ್ಕರ್ ನೀಡಲು ಬಿಜೆಪಿ ರಾಜ್ಯ ಮಟ್ಟದ ಓಬಿಸಿ ಮೋರ್ಚಾ ಬೃಹತ್ ಸಮಾವೇಶ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಇದೇ ತಿಂಗಳ 30 ರಂದು ಕಲಬುರಗಿಯಲ್ಲಿ 5 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡಲು ಬಿಜೆಪಿ ನಿರ್ಧರಿಸಿದೆ. ಈಗಾಗಲೇ ರಾಜ್ಯದ ಪ್ರತಿಜಿಲ್ಲೆಗಳಲ್ಲಿ ಪೂರ್ವಭಾವಿ ಸಂಕ್ಷಿಪ್ತ ಸಭೆಗಾಗಿ ಐದು ತಂಡಗಳು ಸಂಚಾರ ನಡೆಸುತ್ತಿವೆ.
ಮಾಜಿ ಸಚಿವ ಕೆಎಸ್ ಈಶ್ವರಪ್ಪ ನೇತೃತ್ವದ ತಂಡ ಕಲಬುರಗಿ ಭೇಟಿ ನೀಡಿ ಸಭೆ ನಡೆಸಿದೆ. ಈಶ್ವರಪ್ಪ ನೇತೃತ್ವದ ತಂಡ ಈಗಾಗಲೇ ಚಾಮರಾಜನಗರ, ಮಂಡ್ಯ, ಮೈಸೂರು ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಪ್ರವಾಸ ಮುಗಿಸಿ ಇದೀಗ ಕಲಬುರಗಿಗೆ ಬಂದಿದ್ದು, ಮುಂದೆ ಬೀದರ್ ಜಿಲ್ಲೆ ಪ್ರವಾಸಕ್ಕೆ ಹೊರಟಿದೆ.
ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಈಶ್ವರಪ್ಪ, ಜಿಲ್ಲಾ ಮಟ್ಟದಲ್ಲಿ ಪ್ರವಾಸ ಕೈಗೊಂಡು ಸಮಾವೇಶದ ಸಂಕ್ಷಿಪ್ತ ಸಭೆಯ ನಂತರ ಇದೆ ತಿಂಗಳ 10 ರಂದು ಹುಬ್ಬಳ್ಳಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಮತಕ್ಷೇತ್ರದಿಂದ ಹತ್ತು ಜನ ಹಿಂದುಳಿದ ವರ್ಗದ ಪ್ರಮುಖರು, ಇಬ್ಬರು ಮಹಿಳಾ ಮುಂಖಡರು ಭಾಗಿಯಾಗಲಿದ್ದಾರೆ. ಅಕ್ಟೋಬರ್ 30 ರಂದು ಕಲಬುರಗಿಯಲ್ಲಿ ನಡೆಯುವ ಸಮಾವೇಶ ಯಶಸ್ಸಿಗೆ ಶ್ರಮಿಸಲಾಗುತ್ತಿದೆ. ಸಮಾವೇಶದಲ್ಲಿ 5 ಲಕ್ಷ ಜನ ಸೇರುವ ನೀರಿಕ್ಷೆ ಇದೆ ಎಂದು ತಿಳಿಸಿದರು.
ಇದು ಚುನಾವಣೆ ಪ್ರಚಾರ ಅಥವಾ ಕಾಂಗ್ರೆಸ್ಗೆ ಟಕ್ಕರ್ ನೀಡುವ ಯೋಜನೆ ಅಲ್ಲ, ಕಾಂಗ್ರೆಸ್ ಎಲ್ಲಿದೆ ಅಂತ ಅವರಿಗೆ ಟಕ್ಕರ್ ಕೊಡೋದು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯರಿಂದ ಪಿಎಫ್ಐ ಭಾಗ್ಯ: ಕಂದಾಯ ಸಚಿವ ಅಶೋಕ್ ಲೇವಡಿ