ಕಲಬುರಗಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್‌ನ ಎರಡನೇ ಅಲೆಗೆ ಕಲಬುರಗಿ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗ್ತಿದೆ. ಕೊರೊನಾ ಎರಡನೇ ಅಲೆ ಸಂಕಷ್ಟದ ನಡುವೆ ಕೋವಿಡ್ ರೋಗಿಗಳಿಗೆ ಬೆಡ್‌ಗಳ ಕೊರತೆ ಎದುರಾಗಿದೆ.
ಅಗತ್ಯಕ್ಕೆ ತಕ್ಕಂತೆ ಬೆಡ್‌ಗಳ ವ್ಯವಸ್ಥೆ ಇಲ್ಲದಿರುವ ಕಾರಣ ರೋಗಿಗಳು ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಕೇವಲ 133 ನಾರ್ಮಲ್ ಬೆಡ್, 58 ಐಸಿಯು ಬೆಡ್‌ಗಳು, ಇಎಸ್‌ಐ ಮೆಡಿಕಲ್ ಹಬ್‌ನಲ್ಲಿ 150 ನಾರ್ಮಲ್ ಬೆಡ್‌ಗಳು, ಕೇವಲ 30 ಐಸಿಯು ಬೆಡ್‌ಗಳಿವೆ. ಕೊರೊನಾ ಸೋಂಕಿತರ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲೆಯ 15 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ಬೆಡ್‌ಗಳನ್ನ ಸೇರಿಸಿದ್ರೆ ಕೇವಲ 529 ಬೆಡ್‌ಗಳು ಮಾತ್ರ ಜಿಲ್ಲೆಯಲ್ಲಿ ಇವೆ ಎನ್ನಲಾಗಿದೆ. ಈ ವಿಷಯವೇ ಈಗ ತೀವ್ರ ಆತಂಕಕ್ಕೆ ಕಾಣವಾಗಿದೆ.
ಜಿಲ್ಲೆಯಲ್ಲಿ ದಿನಕ್ಕೆ 300 ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗ್ತಿರೋದ್ರಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಟೆನ್ಷನ್ ಶುರುವಾಗಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 27,205 ಕ್ಕೆ ಏರಿಕೆಯಾದರೆ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 2,232 ಕ್ಕೆ ಏರಿಕೆಯಾಗಿದೆ. ಅಲ್ಲದೇ ಕೊರೊನಾಗೆ ಜಿಲ್ಲೆಯಲ್ಲಿ ಇದುವರೆಗೆ 371 ಜನ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2000 ಗಡಿ ದಾಟಿದ್ರೆ, ಇತ್ತ ಕೊರೊನಾ ರೋಗಿಗಳಿಗೆ ಬೆಡ್‌ಗಳಿರೋದು 550 ಮಾತ್ರ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್, ಸೋಂಕಿತರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರೋಕೆ ಅನಾನುಕೂಲ ಆಗ್ತಿದ್ರೆ ಅಂಥವರಿಗೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಅಲ್ಲದೆ ಬೆಡ್‌ಗಳ ಕೊರತೆಯಾಗದಂತೆ ಹೆಚ್ಚಿನ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗ್ತಿದೆ ಎಂದು ಹೇಳಿದ್ದಾರೆ.