ಕಲಬುರಗಿ: ನಾಗರ ಪಂಚಮಿಯನ್ನು ರಾಜ್ಯಾದ್ಯಂತ ಬಸವ ಪಂಚಮಿಯಾಗಿ ಆಚರಿಸಲು ಮಾನವ ಬಂಧುತ್ವ ವೇದಿಕೆ ತೀರ್ಮಾನಿಸಿದೆ.
ನಗರದ ಪತ್ರಿಕಾ ಭವನದಲ್ಲಿ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ ಈ ಬಗ್ಗೆ ಮಾಹಿತಿ ನೀಡಿ, ಅಮೂಲ್ಯವಾದ ಹಾಲನ್ನು ನಾಗರ ಪಂಚಮಿ ದಿನದಂದು ಹುತ್ತಗಳಿಗೆ ಹಾಕಿ ಮೌಢ್ಯತೆ ಬಿತ್ತಲಾಗುತ್ತಿದೆ.
ಹುತ್ತಕ್ಕೆ ಹಾಕುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ ನೀಡಿದರೆ ಅಪೌಷ್ಟಿಕತೆಯಾದರೂ ನಿವಾರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿ, ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಆಗಸ್ಟ್ 5ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮಮಟ್ಟದಲ್ಲಿ ಅಂಗನವಾಡಿ ಮಕ್ಕಳಿಗೆ, ಆಶ್ರಮ ವಾಸಿಗಳಿಗೆ, ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬಿಸಿ ಹಾಲು ವಿತರಿಸಿ ವೈಚಾರಿಕತೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.