ಕಲಬುರಗಿ: ವೈದ್ಯರ ನಿರ್ಲಕ್ಷ್ಯದಿಂದ ಹಸುಗೂಸು ಸಾವನ್ನಪ್ಪಿತು ಎಂದು ಕುಟುಂಬಸ್ಥರು ಆರೋಪಿಸಿ, ಸರ್ಕಾರಿ ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿಂದು ನಡೆಯಿತು. ಮಗುವಿನ ಪೋಷಕರು ಕಣ್ಣೀರು ಹಾಕುತ್ತಾ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು.
ವಿವರ: ಫೆ. 23ರಂದು ಅಫಜಲಪುರ ಆಸ್ಪತ್ರೆಯಲ್ಲಿ ನೌಶಾದ್ ಬೇಗಂ ಎಂಬುವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಕಳೆದ ಮಧ್ಯರಾತ್ರಿ ಮಗು ಹಾಲು ಸೇವಿಸುತ್ತಿಲ್ಲ ಎಂದು ಕುಟುಂಬಸ್ಥರು ಸಿಬ್ಬಂದಿಗೆ ತಿಳಿಸಿದ್ದಾರೆ. "ವೈದ್ಯರು ಮಗುವನ್ನು ನೋಡಿ ವಿಚಾರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ನಮ್ಮ ಮಗು ಸಾವನ್ನಪ್ಪಿದೆ" ಎಂದು ಕುಟುಂಬಸ್ಥರು ಕಿಡಿ ಕಾರಿದ್ದಾರೆ. ಬಳಿಕ ಇಂದು ಬೆಳಗ್ಗೆ ಮೃತದೇಹದೊಂದಿಗೆ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ರಾಜಶೇಖರ ಮಾಲಿ ಕುಟುಂಬಸ್ಥರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಅವರು, ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ. ವಿಚಾರಣೆ ವೇಳೆ ಕುಟುಂಬಸ್ಥರ ಹೇಳಿಕೆ ಸಂಗ್ರಹಿಸಲಾಗಿದೆ. ರಾತ್ರಿ ವೈದ್ಯರನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. 24 ಗಂಟೆಯ ಹಸುಗೂಸಿಗೆ ರಾತ್ರಿ ಮಲಗುವಾಗ ಮಲಗಿದಲ್ಲೇ ತಾಯಿ ಹಾಲು ಕುಡಿಸಿದ್ದಾಳೆ. ಬಳಿಕ ತಾಯಿ ಮಗು ಮಲಗಿದ್ದು, ಬೆಳಗ್ಗೆ 5 ಗಂಟೆಗೆ ಎದ್ದಾಗ ಮಗು ಉಸಿರು ನಿಂತಿರುವುದು ಕಂಡುಬಂದಿದೆ. ವೈದ್ಯರು ತಪಾಸಣೆ ನಡೆಸಿ ಮಗು ಸಾವನ್ನಪ್ಪಿರುವುದನ್ನು ಪೋಷಕರಿಗೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ತಾಯಿ ಎದೆಹಾಲು ಕುಡಿಸಿ ಮಲಗಿಸಿದ್ದಕ್ಕೆ ಮಗು ಎದೆ ಭಾಗದಲ್ಲಿ ಹಾಲು ಹೆಪ್ಪುಗಟ್ಟಿ ಉಸಿರುನಿಂತಿರುವಂತೆ ಕಂಡುಬಂದಿದೆ.
ಪೋಷಕರ ಹೇಳಿಕೆ ಅನ್ವಯ ವರದಿ ತಯಾರಿಸಲಾಗಿದೆ. ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವದು ಎಂದು ಡಿಎಚ್ಓ ತಿಳಿಸಿದ್ದಾರೆ. ಪೋಷಕರು ಮಗುವಿನ ಮೃತದೇಹದ ಸಮೇತ ಮನೆಗೆ ತೆರಳಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತ: ದುಬೈನಲ್ಲಿ ರಾಯಚೂರಿನ ಒಂದೇ ಕುಟುಂಬದ ನಾಲ್ವರ ಸಾವು