ಕಲಬುರಗಿ: ಆಟೋ ಚಾಲಕ ಜಮೀರ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಮೀರ್ ಪಾಶಾ (25) ಹಾಗೂ ಆಕಾಶ್ ಭಜಂತ್ರಿ (22) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿ ಜಮೀರ್ ಅಹ್ಮದ್ ಆಟೋ ಚಾಲಕನಾಗಿದ್ದ, ಎಂದಿನಂತೆ ಭಾನುವಾರ ಸಂಜೆ ಆಟೋ ತಂದು ಹಳೇ ಜೇವರ್ಗಿ ರಸ್ತೆಯ ಶಹಬಾಜ್ ಕಾಲೊನಿ ಕ್ರಾಸ್ ಬಳಿ ನಿಂತಿದ್ದ, ಈ ವೇಳೆ ಹಂತಕರು ದಾಳಿ ನಡೆಸಿದ್ದರು. ತಪ್ಪಿಸಿಕೊಂಡು ಓಡಿದರೂ ಬೆನ್ನು ಬಿಡದ ಹಂತಕರು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹತ್ತಾರು ಬಾರಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣಕಾಸಿನ ವಿಚಾರಕ್ಕಾಗಿ ಕೊಲೆ ನಡೆದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ : ರಾಯಚೂರಿನ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ; ವಿದ್ಯಾರ್ಥಿಯ ತಲೆಗೆ 12 ಹೊಲಿಗೆ!