ಕಲಬುರಗಿ: ತೆಲಂಗಾಣ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಪ್ರತ್ಯೇಕ ಧ್ವಜಾರೋಹಣ ಮಾಡಲು ಯತ್ನಿಸಿದೆ. ಕಲಬುರಗಿಯ ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಧ್ವಜಾರೋಹಣಕ್ಕೆ ಮುಂದಾದ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದರು.
ಮಾಜಿ ಸಚಿವ ದಿ. ಉಮೇಶ ಕತ್ತಿ ಹಾಗೂ ವೈಜನಾಥ ಪಾಟೀಲ್ ಅವರ ಭಾವಚಿತ್ರ ಮತ್ತು ಪ್ರತ್ಯೇಕ ರಾಜ್ಯದ ಧ್ವಜ ಹಿಡಿದು ಎಂ ಎಸ್ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಸೇರಿದ ಜನರು ಪ್ರತಿಭಟನೆ ನಡೆಸಿದರು. ಕೋರ್ಟ್ ಮಾರ್ಗವಾಗಿ ಪಟೇಲ್ ವೃತ್ತಕ್ಕೆ ಧ್ವಜಾರೋಹಣಕ್ಕೆ ಆಗಮಿಸುತ್ತಿದ್ದಾಗ ಮಾರ್ಗಮಧ್ಯೆ ಪೊಲೀಸರು ತಡೆಯೊಡ್ಡಿದರು.
ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ 371 ಜೆ ವಿಧೇಯಕ ಜಾರಿಗೊಳಿಸಿದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ, ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ಈ ಭಾಗದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ಯಾಯ ಮುಂದುವರೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ಹಣ ಪಕ್ಕದ ಜಿಲ್ಲೆಗಳಿಗೆ ಬಳಕೆ ಮಾಡಲಾಗುತ್ತಿದೆ.
ಉದ್ಯೋಗ ನೇಮಕಾತಿ, ಮೀಸಲಾತಿ, ಮುಂಬಡ್ತಿ ವಿಷಯದಲ್ಲಿಯೂ ಕಡೆಗಣನೆ ಮಾಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿಯಲ್ಲಿಯೂ ಈ ಭಾಗಕ್ಕೆ ಅನ್ಯಾಯವಾಗಿದೆ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಗಾಗಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನೀಡಬೇಕೆಂದು ಹೋರಾಟಗಾರರು ಈ ಸಂದದರ್ಭದಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ರಾಜ್ಯೋತ್ಸವ ಸಂಭ್ರಮ: ಪುನೀತ್ ಭಾವಚಿತ್ರವಿರುವ ಕೇಕ್ ಕತ್ತರಿಸಿ ಅಭಿಮಾನ