ಸೇಡಂ(ಕಲಬುರಗಿ): ತಾಲೂಕಿನ ಕೋಲಕುಂದಾ ದೊಡ್ಡ ತಾಂಡಾದಲ್ಲಿ ಕೊರೊನಾ ಪ್ರಾಥಮಿಕ ಸಂಪರ್ಕಿತ ಬಾಲಕಿಯನ್ನು ಕರೆದೊಯ್ಯುವ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ಉಂಟಾಗಿದೆ. ಈ ವೇಳೆ ಆರೋಗ್ಯ ಸಹಾಯಕರ ಮೇಲೂ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ತಾಂಡಾದ 17 ವರ್ಷದ ಬಾಲಕಿ ಕೊರೊನಾ ಸೋಂಕಿಗೆ ಗುರಿಯಾಗಿದ್ದಳು. ಇದರಿಂದ ಆರೋಗ್ಯ ಸಿಬ್ಬಂದಿ, ಪೊಲೀಸರ ಸಹಾಯದೊಂದಿಗೆ ತಾಂಡಾಕ್ಕೆ ತೆರಳಿ ಸೋಂಕಿತ ಬಾಲಕಿಯನ್ನು ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯಲು ಮುಂದಾದಾಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.
ಈ ವೇಳೆ ಗ್ರಾಮದ ವ್ಯಕ್ತಿಯೋರ್ವನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ನೂರಾರು ಜನ ಕಲ್ಲು, ದೊಣ್ಣೆಗಳಿಂದ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಮತ್ತು ಓರ್ವ ಆರೋಗ್ಯ ಸಿಬ್ಬಂದಿಗೆ ಗಾಯಗಳಾಗಿದ್ದು, ಆ್ಯಂಬುಲೆನ್ಸ್ ಗಾಜು ಪುಡಿ-ಪುಡಿಯಾಗಿವೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಇನ್ನುಳಿದ ಕೆಲ ಕೊರೊನಾ ವಾರಿಯರ್ಸ್ಗೆ ಗಾಯಗಳಾಗಿದ್ದು, ಈ ಸಂಬಂಧ ಶಾಂತಿ ಸಭೆ ನಡೆಸಲಾಗುವುದು. ಗ್ರಾಮಸ್ಥರಿಗೆ ತಿಳಿ ಹೇಳಲಾಗುವುದು ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಮಾಹಿತಿ ನೀಡಿದ್ದಾರೆ.