ಕಲಬುರಗಿ: ಇಂಡಿಕೇಟರ್ ಹಾಕಿ ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ಬೈಕ್ ಸವಾರನನ್ನೇ ಮಾರಕಾಸ್ತ್ರಗಳಿಂದ ಕೊಂದು ಪರಾರಿಯಾಗಿದ್ದ ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕಲಬುರಗಿಯ ಗಾಜೀಪುರ ಬಡಾವಣೆಯ ನಿವಾಸಿ ಸ್ವರಾಜ ಸಾಹಿಲ್ ಹೋಡೆಲ್, ಈತನ ತಂದೆ ನಾಗರಾಜ ಹೋಡಲ್ನನ್ನು ಬಂಧಿಸಲಾಗಿದೆ. ಓರ್ವ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮಹಿಂದ್ರಾ ಥಾರ್ ಜೀಪ್ ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಮಾಹಿತಿ ನೀಡಿದರು.
ಘಟನೆಯ ಹಿನ್ನೆಲೆ ಹೀಗಿದೆ..: ಎಂ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆದರ್ಶ ನಗರ ಕ್ರಾಸ್ ರಿಂಗ್ ರಸ್ತೆಯಲ್ಲಿ ಇದೇ ತಿಂಗಳ 22 ರಂದು ಮಧ್ಯರಾತ್ರಿ 12 ಗಂಟೆಯ ವೇಳೆ 24 ವರ್ಷದ ಪ್ರಮೋದ್ ಎನ್ನುವ ಯುವಕನ ಕೊಲೆ ನಡೆದಿತ್ತು. ಪ್ರಮೋದ ಹಾಗೂ ಸಂಬಂಧಿ ಅವಿನಾಶ ಇಬ್ಬರುೂ ಸೇರಿ ರಾತ್ರಿ ಆದರ್ಶ ಕಾಲೋನಿಯಿಂದ ಸೇಡಂ ರಸ್ತೆಯಲ್ಲಿರುವ ಪೂಜಾ ಕಾಲೋನಿಗೆ ಬೈಕ್ನಲ್ಲಿ ಹೋಗುವಾಗ ಕಾರ್ನಲ್ಲಿದ್ದ ಸಾಹಿಲ್ ಕಾರ್ ಹಾರ್ನ್ ಹಾಕುತ್ತಾ ಅಡ್ಡಾದಿಡ್ಡಿ ಚಲಾಯಿಸಿದ್ದಾನೆ. ಇದನ್ನು ಬೈಕ್ನಲ್ಲಿದ್ದ ಪ್ರಮೋದ ಪ್ರಶ್ನಿಸಿದ್ದಾನೆ. ಇವರ ನಡುವೆ ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೂ ವಾಗ್ವಾದ ನಡೆದಿದೆ. ಕಾರಿನಿಂದ ಇಳಿದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬೈಕ್ ಸವಾರ ಪ್ರಮೋದನನ್ನು ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೂ ಆಗಿರುವ ಮೃತನ ಸಂಬಂಧಿ ಅವಿನಾಶ್ ತಿಳಿಸಿದ್ದಾರೆ.
ಕೊಲೆ ನಂತರ ಮನೆಗೆ ಹೋದಾಗ ಸಾಹಿಲ್‌ನ ತಂದೆ ನಾಗರಾಜ್ ತನ್ನ ಮಕ್ಕಳು ಹಾಗೂ ಕಾರನ್ನು ಮುಚ್ಚಿಟ್ಟು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಇದೀಗ ಸಾಹಿಲ್ ಹಾಗೂ ಆತನ ತಂದೆ ನಾಗರಾಜನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಸಾಹಿಲ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡ್ತಿದ್ದಾನೆ. ಈತನ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಅಪರಾದ ಹಿನ್ನಲೆವುಳ್ಳವನಾದ ಸಾಹಿಲ್ ಕಳೆದ ವರ್ಷ ಐಪಿಸಿ ಸೆಕ್ಷನ್ 307 ಅಡಿ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೌಂಡ್‌ಓವರ್ (ಮುಚ್ಚಳಿಕೆ) ಪತ್ರ ಬರೆದುಕೊಟ್ಟಿದ್ದ. ಈತ ಎಂ.ಬಿ.ನಗರ ಠಾಣೆಯಲ್ಲಿ ಬಿ. ರೌಡಿಶೀಟರ್ ಕೂಡಾ ಆಗಿದ್ದಾನೆ.
ಆದರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟವ ಈಗ ಕೊಲೆ ಮಾಡಿ ಜೈಲು ಸೇರಿದ್ದಾನೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್ ವಿವರ ನೀಡಿದ್ದಾರೆ. ಕೊಲೆ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪೊಲೀಸ್ ಆಯುಕ್ತರು, ಸಿಬ್ಬಂದಿಗೆ 10 ಸಾವಿರ ರೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು.. ಅಡ್ಡಾದಿಡ್ಡಿ ಕಾರ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ