ಕಲಬುರಗಿ : ತಡರಾತ್ರಿ ನಡೆದ ಜೋಡಿ ಕೊಲೆ ಜಿಲ್ಲೆಯ ಜನರನ್ನ ಬೆಚ್ಚಿಬೀಳಿಸಿತ್ತು. ಕೊಲೆ ನಡೆದ ಕೇವಲ 24 ಗಂಟೆಯಲ್ಲಿ ಪೊಲೀಸರು ಆರೋಪಿಗಳನ್ನ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಿದ್ದಾರೆ. ಮಗಳನ್ನ ಕೊಲೆ ಮಾಡಲು ಬಂದಿದ್ದ ಕೊಲೆಗಡುಕರು ಆಕೆಯ ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದರು.
ಅಕ್ಟೋಬರ್ 3ರ ಮಧ್ಯರಾತ್ರಿ ನಡೆದ ದಂಪತಿ ಕೊಲೆ ಪ್ರಕರಣ ಜಿಲ್ಲೆಯ ಜನರನ್ನ ಬೆಚ್ಚಿಬೀಳಿಸಿತ್ತು. ಜಿಲ್ಲೆಯ ಕಮಲಾಪುರ ತಾಲೂಕಿನ ದಿನಸಿ (ಕೆ) ತಾಂಡಾದಲ್ಲಿ ನಡೆದ ದಂಪತಿಯ ಜೋಡಿ ಕೊಲೆ ಪ್ರಕರಣವನ್ನ ಪೊಲೀಸರು ಕೇವಲ 24 ಗಂಟೆಯಲ್ಲಿ ಬೇಧಿಸಿದ್ದಾರೆ.
ದಿನಸಿ ತಾಂಡಾದ ಮಾರುತಿ ಮತ್ತು ಶಾರದಾಬಾಯಿ ಅನ್ನೋ ದಂಪತಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿ ಮಹೇಶ್, ಟೋಪು, ಸಂತೋಷ್, ರವಿ ಮತ್ತು ಯೇಸುವನ್ನ ಕಮಲಾಪುರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಆದರೆ, ಬಂಧಿತ ಐವರು ಆರೋಪಿಗಳು ಹೇಳಿರುವ ಕೊಲೆಯ ಕಾರಣ ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ. ಯಾಕಂದರೆ, ಕೊಲೆಯಾದ ಮಾರುತಿ ಜಾಧವ್ ಅವರ ಮೊದಲನೆ ಹೆಂಡತಿಯ ಮಗಳನ್ನ ಕೊಲೆ ಮಾಡಲು ಹಂತಕರು ಮಧ್ಯರಾತ್ರಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಮೊದಲನೆ ಹೆಂಡತಿಯ ಮಕ್ಕಳು ಮಾರುತಿಯ ಸಹೋದರ ಈಶ್ವರ ಜಾಧವ್ ಮನೆಯಲ್ಲಿ ಮಲಗಿದ್ದರು. ಇತ್ತ ಮಾರುತಿ ತನ್ನ ಎರಡನೆ ಹೆಂಡತಿ ಮತ್ತು ಮೂವರು ಮಕ್ಕಳ ಜೊತೆ ಮನೆ ಹೊರಗಡೆ ಮಲಗಿದ್ದರು.
ಹಂತಕರು ಮನೆ ಬಾಗಿಲು ಓಪನ್ ಮಾಡುತ್ತಿದ್ದಂತೆ, ಮಾರುತಿ ನಿದ್ದೆಯಿಂದ ಎದ್ದಿರೋದನ್ನ ಕಂಡು ಎಲ್ಲಿ ತಮ್ಮ ರಹಸ್ಯ ಬಯಲಾಗುತ್ತೋ ಎಂದು ಮಾರುತಿ ಮಗಳ ಬದಲು ಮಾರುತಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಮಾರುತಿಗೆ ಚಾಕುವಿನಿಂದ ಇರಿಯುತ್ತಿದ್ದಂತೆ ಪಕ್ಕದಲ್ಲೇ ಮಲಗಿದ್ದ ಮಾರುತಿಯ ಎರಡನೆ ಹೆಂಡತಿ ಶಾರಾದಾಬಾಯಿ ಎಚ್ಚರಗೊಳ್ಳುತ್ತಿದ್ದಂತೆ ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆ ಗೈದು ಪರಾರಿಯಾಗಿದ್ದಾರೆ. ತಂದೆ ತಾಯಿಯ ಕೊಲೆಯನ್ನ ಹಾಸಿಗೆಯಲ್ಲಿಯೇ ಕಣ್ಣಾರೆ ಕಂಡ ಏಳು ವರ್ಷದ ಮಗ ಭಯ ಭೀತನಾಗಿದ್ದಾನೆ.
ದಂಪತಿಯ ಕೊಲೆ ಪ್ರಕಣದ ಎ1 ಆರೋಪಿ ಮಹೇಶ್ ಮಾರುತಿಯ ಮೊದಲ ಹೆಂಡತಿ ಜೈನಾಬಾಯಿ ಮೊದಲ ಮಗಳ ಮೇಲೆ ಕಣ್ಣು ಹಾಕಿದ್ದ. ಕಳೆದ ಎರಡು ತಿಂಗಳ ಹಿಂದೆ ಆಕೆಯ ಮೇಲೆ ಮಹೇಶ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಪೋಸ್ಕೊ ಕಾಯ್ದೆ ಅಡಿ ಕಮಲಾಪುರ ಠಾಣೆಯಲ್ಲಿ ಮಹೇಶ್ ಮತ್ತು ಆತನಿಗೆ ಸಹಕಾರ ನೀಡಿದ್ದ ಟೋಪು ವಿರುದ್ಧ ಕೇಸ್ ದಾಖಲಾಗಿತ್ತು. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಟೋಪುವನ್ನ ಬಂಧಿಸಿದ್ದರು. ಆದರೆ, ಆರೋಪಿ ಮಹೇಶ್ ಎಸ್ಕೇಪ್ ಆಗಿದ್ದ.
ನಂತರ ಆರೋಪಿ ಮಹೇಶ್ ನಿಮ್ಮ ಮಗಳನ್ನ ಮದುವೆ ಆಗುತ್ತೇನೆಂದು ಮಾರುತಿಗೆ ಹೇಳಿದ್ದ. ಆದರೆ, ತಿಂಗಳುಗಳೆ ಕಳೆದರೂ ಮದುವೆ ಆಗದೆ ಕಾಲಹರಣ ಮಾಡಿದ್ದ. ಹೀಗಾಗಿ, ಮಾರುತಿ ಕೇಸ್ ಕೊಡುವುದಾಗಿ ಆರೋಪಿ ಮಹೇಶ್‌ಗೆ ಹೇಳಿದ್ದ. ಆಗಲೇ ನೋಡಿ ಮಗಳನ್ನ ಕೊಲೆ ಮಾಡಲು ಮಹೇಶ್ ಪ್ಲ್ಯಾನ್ ರೂಪಿಸಿಕೊಂಡು ತನ್ನ ಸಹಚರರೊಂದಿಗೆ ಮಾಸ್ಕ್ ಧರಿಸಿಕೊಂಡು ಮನೆಗೆ ನುಗ್ಗಿ ಮಗಳ ಬದಲು ಆಕೆಯ ಹೆತ್ತವರ ಕಥೆಯನ್ನೇ ಫಿನಿಷ್ ಮಾಡಿದ್ದ.
ಕೊಲೆ ನಂತರ ಕಮಲಾಪುರ ಹೊರವಲಯದ ಗುಡ್ಡಗಾಡು ಪ್ರದೇಶದಲ್ಲಿ ಆರೋಪಿಗಳು ತೆಲೆ ಮರೆಸಿಕೊಂಡಿದ್ದರು. ಹಂತಕರ ಹೆಜ್ಜೆ ಗುರುತು ಹಿಡಿದು ಬೆನ್ನಟ್ಟಿದ್ದ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ದುರಂತ ಅಂದ್ರೆ ಮೊದಲ ಹೆಂಡತಿ ಮಕ್ಕಳು ಅನಾಥ ಆಗಬಾರದು ಎಂದು ಎರಡನೆ ಹೆಂಡತಿಯನ್ನ ಮದುವೆಯಾಗಿದ್ದ ಮಾರುತಿ. ಆದರೆ, ಇದೀಗ ಹಂತಕರ ಕೈಗೆ ಸಿಕ್ಕು ದಂಪತಿ ಬಲಿಯಾಗಿದ್ದು, ಏಳು ಜನ ಮಕ್ಕಳು ಮತ್ತೆ ಅನಾಥರಾಗಿದ್ದಾರೆ.