ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದಿದ್ದ ಬಾಲಕನ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾರಾ ಬಿ ಮತ್ತು ಮೆಹಬೂಬ್ ಬಂಧಿತ ಆರೋಪಿಗಳು. ನರಿಬೋಳ ಗ್ರಾಮದ 14ರ ಬಾಲಕ ಅದೇ ಗ್ರಾಮದ ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ ಆರೋಪಿ ತಾರಾ ಬಿ ಪುತ್ರಿಯನ್ನು ಪ್ರೀತಿಸುತ್ತಿದ್ದ. ಜೊತೆಗೆ ಆಕೆಗೆ ಹೊಸ ಮೊಬೈಲ್ ಸಹ ಕೊಡಿಸಿದ್ದನಂತೆ. ಆದರೆ, ಯುವತಿಯ ತಾಯಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ, ತನ್ನ ಪರಿಚಯಸ್ಥ ಮೆಹಬೂಬ್ ಎಂಬಾತನಿಗೆ ಬಾಲಕನನ್ನು ಹೆದರಿಸಲು ಹೇಳಿದ್ದಳು. ಆತ ಒಂದೆರಡು ಬಾರಿ ಆತನಿಗೆ ಹೆದರಿಸಿದ್ದದರೂ ಬಾಲಕ ಮತ್ತು ಯುವತಿ ನಡುವಿನ ಪ್ರೀತಿ ಮುಂದುವರಿದಿತ್ತು.
ಇದರಿಂದ ಕುಪಿತಗೊಂಡ ಮೆಹಬೂಬ್ ಮತ್ತು ಯುವತಿ ತಾಯಿ ತಾರಾ ಬಿ, ಸ್ನೇಹಿತರ ಜೊತೆಗೂಡಿ ಬಾಲಕನನ್ನು ಬೋಟ್ನಲ್ಲಿ ಚಾಮನೂರು ಬ್ರಿಡ್ಜ್ ಬಳಿ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿದ್ದಾರೆ. ನಂತರ ಬಾಲಕನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಆ ಬಳಿಕ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಗೋಣಿ ಚೀಲದಲ್ಲಿ ಹಾಕಿ ನರಿಬೋಳ - ಚಾಮನೂರು ಭೀಮಾ ನದಿಯಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಕೆಳಗೆ ಶವ ಎಸೆದಿದ್ದರು. ಫೆಬ್ರವರಿ 25ರಂದು ಬಾಲಕನ ಶವ ಭೀಮಾ ನದಿ ದಡದಲ್ಲಿ ಪತ್ತೆಯಾಗಿತ್ತು.
ಓದಿ: ಯುವತಿಯ ಪ್ರೀತಿ ಬಲೆಗೆ ಬಿದ್ದ ಬಾಲಕ: ಬುದ್ಧಿ ಮಾತು ಕೇಳದ್ದಕ್ಕೆ ಕೈಕಾಲು ಕಟ್ಟಿ ಭೀಮಾ ನದಿಗೆ ಎಸೆದ ಕಿರಾತಕರು!
ಪ್ರಕರಣದ ಬೆನ್ನಟ್ಟಿದ ಪೊಲೀಸರು, ಬಾಲಕನ ಮೊಬೈಲ್ ಕಾಲ್ ಹಿಸ್ಟರಿ ತೆಗೆದಾಗ ಬಾಲಕನ ಪ್ರೀತಿಯ ವಿಷಯ ತಿಳಿದಿದೆ. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿಗಳ ಸುಳಿವು ಸಿಕ್ಕಿದ್ದು, ತಾರಾ ಬಿ ಮತ್ತು ಮೆಹಬೂಬ್ ಬಂಧಿಸಿ ಜೈಲಿಗಟ್ಟಿದ್ದಾರೆ. ಕೊಲೆಯಾದ ಬಾಲಕ ಏಳನೇ ತರಗತಿವರೆಗೆ ಓದಿ, ನಂತರ ಊರಲ್ಲೇ ಓಡಾಡಿಕೊಂಡಿದ್ದ ಎನ್ನಲಾಗಿದೆ.