ಕಲಬುರಗಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಮತ್ತೊಬ್ಬ ಅಭ್ಯರ್ಥಿಯನ್ನು ಅರೆಸ್ಟ್ ಮಾಡಿದೆ. ಸಂಜೀವ ಕುಮಾರ್ ಮುರಡಿ ಬಂಧಿತ ಆರೋಪಿ. ಜೇವರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರನಾಗಿರುವ ಈತ, ಕಲಬುರಗಿ ನಗರದ ರೇಷ್ಮಿ ಕಾಲೇಜಿನಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದಾನೆ. ಕಲ್ಯಾಣ ಕರ್ನಾಟಕದ ಗ್ರಾಮೀಣ ಸಾಮಾನ್ಯ ಕೋಟಾದಡಿ ಪರೀಕ್ಷೆ ಬರೆದು 14ನೇ ರ‌್ಯಾಂಕ್ ಪಡೆದು ಆಯ್ಕೆಯೂ ಆಗಿದ್ದನು.
ಸಂಜೀವ ಕುಮಾರ್ ಮೈಕ್ರೋ ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮವೆಸಗಿ ನೇಮಕಗೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳು ಅಕ್ರಮದ ಜಾಲ ಭೇದಿಸುತ್ತ ಈತನನ್ನು ಬಂಧಿಸಿದ್ದಾರೆ. ಈ ಕುರಿತಂತೆ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಸಿಐಡಿ ಆರೋಪಿಯ ವಿಚಾರಣೆ ನಡೆಯುತ್ತಿದೆ. ಕಲಬುರಗಿಯಲ್ಲಿ ಈವರೆಗೆ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ 55ಕ್ಕೂ ಹೆಚ್ಚು ಆರೋಪಿಗಳನ್ನು ಸಿಐಡಿ ಬಂಧಿಸಿದೆ.
ಹಗರಣದ ಮತ್ತೋರ್ವ ಆರೋಪಿ ಕಲ್ಲಪ್ಪ ಅಲ್ಲಾಪೂರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಲಬುರಗಿಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಈತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರಿದ್ದ ಪೀಠ ಆರೋಪಿ ಜಾಮೀನಿಗೆ ಅರ್ಹನಲ್ಲ ಮತ್ತು ತನಿಖೆಯಲ್ಲಿ ಈತನ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳು ಕಂಡುಬಂದಿರುವ ಕಾರಣಕ್ಕೆ ಜಾಮೀನು ನಿರಾಕರಿಸಿದೆ.
ಕಲ್ಲಪ್ಪ ಅಲ್ಲಾಪೂರ ಪಿಎಸ್‍ಐ ಲಿಖಿತ ಪರೀಕ್ಷೆಯಲ್ಲಿ ಸಹಾಯ ಮಾಡಿ ಹುದ್ದೆಗೆ ಆಯ್ಕೆಯಾಗುವಂತೆ ಮಾಡಬೇಕೆಂದು ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲನಿಗೆ ಕೇಳಿಕೊಂಡಿದ್ದ. ಇದಕ್ಕೆ ಆರ್.ಡಿ.ಪಾಟೀಲ 40 ಲಕ್ಷ ರೂ.ಕೊಟ್ಟರೆ ಪರೀಕ್ಷೆಯಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದ. ಹಣದ ವಿಚಾರವಾಗಿ ಇಬ್ಬರ ನಡುವೆ ಚರ್ಚೆ ನಡೆದು 30 ಲಕ್ಷಕ್ಕೆ ಡೀಲ್ ಫೈನಲ್ ಆಗಿತ್ತು. 15 ಲಕ್ಷ ರೂ.ಮುಂಗಡವಾಗಿ ನೀಡಲು ಕಲ್ಲಪ್ಪ ಅಲ್ಲಾಪೂರ ಮತ್ತು ಅವರ ಸಹೋದರ ಬಸವರಾಜ ಅಲ್ಲಾಪೂರ ಒಪ್ಪಿಕೊಂಡಿದ್ದರು.
ಅದರಂತೆ, ಆರ್.ಡಿ.ಪಾಟೀಲ್, ಕಲ್ಲಪ್ಪ ಅಲ್ಲಾಪೂರನ ಮೊಬೈಲ್ ನಂಬರ್ ಪಡೆದು ಬ್ಲೂಟೂತ್ ಡಿವೈಸ್ ಮತ್ತು ಇಯರ್ ಫೋನ್‍ಗಳನ್ನು ಒದಗಿಸಿದ್ದ ಎನ್ನಲಾಗಿದೆ. ಇನ್ನೊಬ್ಬ ಆರೋಪಿ ಕಾಶಿನಾಥ ಚಿಳ್ಳಗೆ 5 ಲಕ್ಷ ರೂ.ನೀಡಿ ಪಿಎಸ್‍ಐ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಫೋಟೋಗಳನ್ನು ಅಕ್ರಮವಾಗಿ ವಾಟ್ಸಾಪ್ ಮೂಲಕ ಪಡೆದುಕೊಂಡು ಪರೀಕ್ಷೆ ಬರೆದಿದ್ದ. ಹಗರಣ ಬೆಳಕಿಗೆ ಬಂದ ನಂತರ ಕಲ್ಲಪ್ಪ ಅಲ್ಲಾಪೂರನನ್ನು ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಆರೋಪಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ. ಇದೀಗ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ: ಪಿಎಸ್ಐ ಹಗರಣದ ಆರೋಪಿ ಹರೀಶ್ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್