ಗಂಗಾವತಿ : ಐತಿಹಾಸಿಕ ಹಾಗೂ ಪೌರಾಣಿಕೆ ಹಿನ್ನೆಲೆಯುಳ್ಳ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಹಾಗೂ ಇತರೆ ಧಾರ್ಮಿಕ ವಿಧಿಗಳನ್ನು ಕೈಗೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿ ದೇಗುಲದ ಈ ಹಿಂದಿನ ಅರ್ಚಕ ವಿದ್ಯಾದಾಸ ಬಾಬಾ ರಾಜಧಾನಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಬೆಂಗಳೂರಿನ ಫ್ರಿಡಂ ಪಾರ್ಕ್ನಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನೂರು ಜನ ಬೆಂಬಲಿಗರೊಂದಿಗೆ ಉಪವಾಸ ನಿರಶನ ನಡೆಸಲಿದ್ದು, ಅವಕಾಶ ನೀಡುವಂತೆ ಈಗಾಗಲೇ ಪಶ್ಚಿಮ ವಿಭಾಗದ ಪೊಲೀಸರಿಗೆ ಮನವಿ ಸಲ್ಲಿಸಿ ಅನುಮತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿರುವ ವಿದ್ಯಾದಾಸ ಬಾಬಾ, ಅಂಜನಾದ್ರಿ ಪರ್ವತ ಲಾಡರ್ ಹನುಮಾನ್ ವಿಕಾಸ ಟ್ರಸ್ಟ್ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಬಳಿಕ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯ ಮುಂದೆಯೂ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ದೇಗುಲದಲ್ಲಿ ಪೂಜೆ ಮತ್ತು ಇತರೆ ಧಾರ್ಮಿಕ ವಿಧಾನಗಳನ್ನು ಕೈಗೊಳ್ಳಲು ಅವಕಾಶ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಆದರೆ, ಗಂಗಾವತಿ ತಹಶೀಲ್ದಾರ್ ಅದಕ್ಕೆ ಅವಕಾಶ ನೀಡದೇ ಕೇವಲ ಐದು, ಹತ್ತು ನಿಮಿಷ ಪೂಜೆ ಮಾತ್ರ ಅವಕಾಶ ಕಲ್ಪಿಸಿ ಅರ್ಚಕರನ್ನು ದೇಗುಲದಿಂದ ಹೊರಕ್ಕೆ ಹಾಕಲಾಗುತ್ತಿದೆ. ಇದನ್ನು ವಿರೋಧಿಸಿ ಹಾಗೂ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.