ಕಲಬುರಗಿ : ಬಾಬ್ರಿ ಮಸೀದಿಯ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳನ್ನು ದೋಷಮುಕ್ತವೆಂದು ಲಖನೌ ನ್ಯಾಯಾಲಯ ನೀಡಿರುವ ತೀರ್ಪನ್ನು ಆಂದೋಲ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸ್ವಾಗತಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯ ನೀಡಿರುವ ಅವರು, ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕೇಂದ್ರ ಸರ್ಕಾರ ಬಿಜೆಪಿ ಹಾಗೂ ಹಿಂದೂ ನಾಯಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿತ್ತು. ಚಲೋ ಅಯೋಧ್ಯೆ ಕರೆ ನೀಡುವ ಮೂಲಕ ಬಾಬರಿ ಮಸೀದಿಯನ್ನು ಆರು ಲಕ್ಷ ಹಿಂದೂಗಳು ಧ್ವಂಸಗೊಳಿಸಿದ್ದರು. ರಾಜಕೀಯ ಪಿತೂರಿಯಿಂದ ಅಂದಿನ ಸರ್ಕಾರ ಸುಳ್ಳು ಮೊಕದ್ದಮೆ ದಾಖಲಿಸಿತ್ತು.
ಸುಳ್ಳು ಮೊಕದ್ದಮೆ ವಿರುದ್ಧ 28 ವರ್ಷಗಳ ನಿರಂತರ ಕಾನೂನು ಹೋರಾಟದಲ್ಲಿ ಗೆಲುವು ಸಿಕ್ಕಿದೆ. ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಳ್ಳು ಮೊಕದ್ದಮೆಗೆ ನ್ಯಾಯಾಲಯ ತಕ್ಕ ಉತ್ತರ ನೀಡಿದೆ.
ಅಂದು ಬಾಬ್ರಿ ಮಸೀದಿ ನೆಲಸಮಗೊಳಿಸಿದ್ದರಿಂದಲೇ ಇಂದು ಅಯೋಧ್ಯೆ ಮಂದಿರ ನಿರ್ಮಾಣವಾಗುತ್ತಿದೆ. ನ್ಯಾಯಾಲಯದ ತೀರ್ಪಿನಿಂದ ಸಂತಸವಾಗಿದೆ, ತೀರ್ಪನ್ನು ಹಿಂದೂ ಸಮಾಜ ಸ್ವಾಗತಿಸುತ್ತದೆ ಎಂದರು.