ಕಲಬುರಗಿ: ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅರ್ಚಕರು ದೇವರ ಹೆಸರಿನಲ್ಲಿಯೇ ಭಕ್ತರಿಗೆ ಪಂಗನಾಮ ಹಾಕಿರುವ ಆರೋಪ ಕೇಳಿಬಂದಿದೆ. ದತ್ತಾತ್ರೇಯ ದೇವಸ್ಥಾನಕ್ಕೆ ದೇಶದ ಮೂಲೆಮೂಲೆಗಳಲ್ಲಿ ಭಕ್ತರಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಅರ್ಚಕರು ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಭಕ್ತರಿಗೆ ವಂಚಿಸಿದ್ದಾರೆ. ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಭೇಟಿ ನೀಡಿದಾಗ ಪ್ರಕರಣ ಬಯಲಿಗೆ ಬಂದಿದೆ.
ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.devalgangapur.com ಎಂದಿದೆ. ಆದ್ರೆ ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ ಅರ್ಚಕರೇ ಏಳೆಂಟು ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸಿದ್ದಾರೆ. ದರ್ಶನ, ವಿಶೇಷ ಪೂಜೆ, ಅರ್ಚನೆ ಸೇರಿ ದೂರದ ಊರಿನಲ್ಲಿಯೇ ಕುಳಿತು ಆನ್‌ಲೈನ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ದೇವಸ್ಥಾನಕ್ಕೆ ಸಲ್ಲಿಸುವ ದಾನವನ್ನು ಕೂಡಾ ವಂಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂ ವಂಚಿಸಿದ್ದಾರೆ. ದೇವಸ್ಥಾನದ ಹುಂಡಿ ಎಣಿಕೆ ವೇಳೆಯೂ ಸಿಸಿ ಕ್ಯಾಮರಾಗಳನ್ನು ಮುಚ್ಚಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
ದೇವಸ್ಥಾನದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಯಶವಂತ ಗುರುಕರ್ ಸೂಚನೆ ಮೇರೆಗೆ ದೇವಲಗಾಣಗಾಪುರ ಠಾಣೆಯಲ್ಲಿ ಏಳು ಜನರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕೇವಲ ಅರ್ಧ ಗಂಟೆಯಲ್ಲಿ ನಕಲಿ ವೆಬ್ಸೈಟ್ಗಳು ಡಿಲೀಟ್ ಆಗಿವೆ.
ಇದನ್ನೂ ಓದಿ: 21ವರ್ಷದ ಅರ್ಚಕನ ಜೊತೆ 35ರ ವಿವಾಹಿತೆ ಪರಾರಿ: ನಂಬಿಸಿ ಕರೆದೊಯ್ದವನು ಕಾಡಲ್ಲೇ ಕೈಕೊಟ್ಟ!
ಸುಮಾರು ಮೂರ್ನಾಲ್ಕು ವರ್ಷಗಳಿಂದ ವಂಚನೆ ನಡೆಯುತ್ತಿದ್ದು, ದೇವಸ್ಥಾನದಿಂದ ಮುಜರಾಯಿ ಇಲಾಖೆಗೆ ಬರಬೇಕಾದ ಕೋಟ್ಯಂತರ ರೂಪಾಯಿ ಆದಾಯವನ್ನು ಖದೀಮರು ಎಗರಿಸಿದ್ದಾರೆ. ನಷ್ಟದ ಹಣವನ್ನು ಇವರಿಂದಲೇ ವಸೂಲಿ ಮಾಡುವ ಸಾಧ್ಯತೆ ಇದೆ.