ಕಲಬುರಗಿ: ವಿವಿಧ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ನಾಳೆಯೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಕುಮಾರ್ ಮತ್ತು ಎಸ್.ಪಿ.ಅಡ್ಡೂರು ಶ್ರೀನಿವಾಸಲು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಕೊಟ್ಟರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ರಂಗನಾಥ ಅವರನ್ನು, ಜೈಲಿನಲ್ಲಿ ಏನು ನಡೀತಿದೆ. ಅಕ್ರಮವಾಗಿ ಗುಟಕಾ ಪೂರೈಸಲಾಗುತ್ತಿದೆಯಂತೆ ಎಂದು ಪ್ರಶ್ನಿಸಿದರು. ಇವೆಲ್ಲದಕ್ಕೂ ಕಡಿವಾಣ ಹಾಕಬೇಕು. ಯಾವುದೇ ಅಕ್ರಮ ಚಟುಚಟಿಕೆಗೆ ಜೈಲು ಅಡ್ಡವಾಗಬಾರದು. ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಕುಮಾರ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.
ಬಿಜೆಪಿ ವಿರುದ್ಧ ವಾಗ್ದಾಳಿ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಎರಡೂ ಮನೆಗೂ ಬೆಂಕಿ ಬಿದ್ದಿದೆ. ಬೆಳಗಾವಿಯಲ್ಲಿ ಇದನ್ನು ನೋಡಿದ್ದೇವೆ. ಇವರದ್ದು ಮನೆಯೊಂದು ಮೂರು ಬಾಗಿಲಾಗಿದೆ. ಒಂದು ಬಾಗಿಲನ್ನು ಯತ್ನಾಳ್ ಕಾಯ್ತಿದ್ದಾರೆ. ಇನ್ನೊಂದು ಬಾಗಿಲನ್ನು ಅಶೋಕ್ ಕಾಯ್ತಿದ್ದಾರೆ. ಮೂರನೇ ಬಾಗಿಲನ್ನು ವಿಜಯೇಂದ್ರ ಕಾಯ್ತಿದ್ದಾರೆ. ಇವರಲ್ಲಿ ಸಮನ್ವಯ ಎಲ್ಲಿದೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕನ್ನಡಿಗರೊಬ್ಬರು ಪ್ರಧಾನಿಯಾಗ್ತಾರೆ ಅಂದ್ರೆ ಅದು ನಮಗೆ ಹೆಮ್ಮೆಯ ವಿಚಾರ. ನಾವು ಮೊದಲು ಕಾಂಗ್ರೆಸ್ನಿಂದ 200-250 ಸ್ಥಾನಗಳನ್ನು ಗೆಲ್ಲಬೇಕು. ಮೈತ್ರಿಕೂಟದ ಜೊತೆ ಒಗ್ಗೂಡಿ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂದರು.ಈಗಾಗಲೇ ಎಐಸಿಸಿ ಅಧ್ಯಕ್ಷರು ಈ ಬಗ್ಗೆ ಮಾತನಾಡಿದ್ದಾರೆ. ಆದಷ್ಟು ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ದೆಹಲಿಗೆ ಕಳುಹಿಸುವುದು ನಮ್ಮ ಮುಂದಿರುವ ಸವಾಲು. ಬಹುಮತ ತರಲು ಏನೇನು ಮಾಡಬೇಕೋ ಮಾಡುತ್ತೇವೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಇದನ್ನೂ ಓದಿ: 'ವಿಶ್ವಕರ್ಮ ಶ್ರಮ ಸನ್ಮಾನ ಯೋಜನೆ' ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ: ವಿಜಯೇಂದ್ರ