ಕಲಬುರಗಿ: 'ಯುವರತ್ನ' ಚಲನಚಿತ್ರದ ಪ್ರಚಾರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಸಿಲೂರು ಕಲಬುರಗಿಗೆ ಆಗಮಿಸಿದ್ದಾರೆ.
ಸರಡಗಿ ಏರ್ಪೋರ್ಟ್ನಿಂದ ಶ್ರೀ ಶರಣಬಸವೇಶ್ವರ ದೇಗುಲಕ್ಕೆ ಆಗಮಿಸಿದ ಪುನೀತ್ ರಾಜಕುಮಾರ್ಗೆ 15 ಜೆಸಿಬಿಗಳ ಮೂಲಕ ಹೂವಿನ ಸುರಿಮಳೆಗೈಯುವ ಮೂಲಕ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿದರು.
ನಗರದ ಏಷಿಯನ್ ಮಾಲ್ ಆವರಣದಲ್ಲಿ ನಡೆಯಬೇಕಿದ್ದ 'ಯುವಸಂಭ್ರಮ' ಕಾರ್ಯಕ್ರಮ ಕೋವಿಡ್ ಕಾರಣಕ್ಕೆ ಅನುಮತಿ ಸಿಗದೇ ರದ್ದಾಗಿರುವ ಕಾರಣ, ಶ್ರೀ ಶರಣಬಸವೇಶ್ವರರ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಹೀಗಾಗಿ, ಶರಣಬಸವೇಶ್ವರ ದೇವಸ್ಥಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
'ಜೈ ಕಲಬುರಗಿ' ಅಂತ ಕೂಗಿ ಅಭಿಮಾನಿಗಳತ್ತ ಕೈಬೀಸಿದ ಪುನೀತ್ ರಾಜಕುಮಾರ್, ನಾನು ಚಿಕ್ಕವನಿದ್ದಾಗ ಅಪ್ಪಾಜಿ ಜೊತೆ ಕಲಬುರಗಿಗೆ ಆಗಮಿಸಿದ್ದೆ. ಅವರೊಟ್ಟಿಗೆ ಈ ನೆಲದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ನಾನು ದೊಡ್ಡವನಾದ ನಂತರ ಕಲಬುರಗಿಗೆ ಎರಡ್ಮೂರು ಸಲ ಬಂದಿದ್ದೇನೆ. ಕೋವಿಡ್ ಲಾಕ್‌ಡೌನ್ ನಂತರ ಮೊದಲ ಬಾರಿಗೆ ಕಲಬುರಗಿಗೆ ಬಂದಿದ್ದೇನೆ. ನಿಮ್ಮ ಅಭಿಮಾನಕ್ಕೆ ನಾ ಸದಾ ಚಿರಋಣಿ. ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲಿ ನನ್ನ ಅಭಿನಯದ ಕೆಲ ಚಿತ್ರಗಳ ಶೂಟಿಂಗ್ ಮಾಡಲು ನಿರ್ಧರಿಸಿದ್ದೇನೆ. ನೋಡಿ, ಪ್ರೋತ್ಸಾಹಿಸಿ ಎಂದು ಅಭಿಮಾನಿಗಳಗೆ ಮನವಿ ಮಾಡಿದರು.
ನಮ್ಮ ಯುವರತ್ನ ಚಿತ್ರದ ತಂಡವು ಕಲ್ಯಾಣ ಕರ್ನಾಟಕದ ಕಲಬುರಗಿಯಿಂದಲೇ 'ಯುವರತ್ನ' ಸಿನಿಮಾದ ಪ್ರಚಾರ ಆರಂಭಿಸಲು ನಿರ್ಧರಿಸಿದ್ದರಿಂದ ಇಂದು ನಿಮ್ಮ ಊರಿನಿಂದ ನಮ್ಮ ಪಯಣವನ್ನು ಪ್ರಾರಂಭಿಸಿದ್ದೇವೆ. ಚಲನಚಿತ್ರ ನೋಡಿ, ನನಗೆ ಮತ್ತು ನಮ್ಮ ಚಿತ್ರತಂಡಕ್ಕೆ ಹಾರೈಸಿ ಎಂದು ಪವರ್ಸ್ಟಾರ್ ಕೇಳಿಕೊಂಡರು.
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸಂತೋಷ ಆನಂದರಾಮ್, ನಟ ಡಾಲಿ ಧನಂಜಯ್, ಯುವ ಮುಖಂಡ ಚಂದ್ರಕಾಂತ ಪಾಟೀಲ್, ನಿತೀನ್ ಗುತ್ತೇದಾರ, ಶರಣು ಮೋದಿ ಸೇರಿದಂತೆ ಅನೇಕರು ಇದ್ದರು.
ಓದಿ: ಕೊರೊನಾ ಎರಡನೇ ಅಲೆ ಆರ್ಭಟ.. ಆಗುತ್ತಾ ನೈಟ್ ಕರ್ಫ್ಯೂ? ಸಮಿತಿ ಶಿಫಾರಸು ಏನು?