ಕಲಬುರಗಿ: FDA ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾನೆ. 'ದಾಖಲೆ ಇದ್ದರೆ ಕೊಡ್ರೋ, ಸುಮ್ಮನೆ ಹೇಳೋದಲ್ಲ' ಎಂದು ಆರೋಪಿ ಹೇಳಿದ್ದಾನೆ. ಅಶೋಕ ನಗರ ಪೊಲೀಸ್ ಠಾಣೆಯಿಂದ ಸ್ಪಾಟ್ ಮಹಜರ್ಗೆ ಪೊಲೀಸರು ಕರೆದೊಯ್ಯುವ ವೇಳೆ ಆರ್ ಡಿ ಅಹಂಕಾರ ತೋರಿದ್ದಾನೆ. ಪೊಲೀಸರ ಎದುರೇ ಮಾಧ್ಯಮದವರಿಗೆ 'ದಾಖಲೆ ಇದ್ದರೆ ಕೊಡ್ರೋ, ಸುಮ್ಮನೆ ಹೇಳೋದಲ್ಲ' ಎಂದಿದ್ದಾನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್‌ಡಿಎ ಪರೀಕ್ಷೆಯಲ್ಲಿ ಪಾಟೀಲ್ ಅಕ್ರಮ ಎಸೆಗಿರುವ ಆರೋಪ ಎದುರಿಸುತ್ತಿದ್ದು, ಶುಕ್ರವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ಕೆಇಎ ಪರೀಕ್ಷೆ ಅಕ್ರಮ ಪ್ರಕರಣ - ಸಿಐಡಿ ತನಿಖೆಗೆ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧೆಡೆ ನಡೆದ ಅಕ್ರಮ ಬ್ಲೂಟೂತ್ ಡಿವೈಸ್ ಬಳಕೆಯ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಅಫಜಲಪುರ ಠಾಣೆಯಲ್ಲಿ ಐಪಿಸಿ 109, 114, 120 ಬಿ ಸೇರಿದಂತೆ ಇತರೆ ಸೆಕ್ಷನ್ ಅಡಿ ದಾಖಲಾದ ಕ್ರೈಮ್ ನಂ.267/2023 ಪ್ರಕರಣವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಐಡಿ ತನಿಖೆಗೆ ಒಪ್ಪಿಸುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್. ಹಿತೇಂದ್ರ ಅವರು ಸೂಚಿಸಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ ಬ್ಲೂಟೂತ್ ಬಳಕೆ ಕುರಿತಾಗಿ ರಾಜ್ಯದ ಎಂಟು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದ ಬಳಿಕ ಪ್ರಕರಣದ ಪ್ರಮುಖ ಹಾಗೂ ಇತರ ಆರೋಪಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.
ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಆರ್‌ಡಿ ಪಾಟೀಲ್, ನವೆಂಬರ್ 6 ರಂದು ನಗರದ ವರ್ಧಾ ಲೇಔಟ್‌ನ ಮಹಾಲಕ್ಷ್ಮಿ ಅಪಾರ್ಟ್ಮೆಂಟ್ ಹಿಂಭಾಗದ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದ. ಕಲಬುರಗಿ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದ. ಕೊನೆಗೂ ಪೊಲೀಸರು 7 ತಂಡ ರಚನೆ ಮಾಡಿ ನಿನ್ನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಪತಿಯ ಸ್ಥಿತಿ ಕಂಡು ಕಣ್ಣೀರು ಹಾಕಿದ ಆರ್‌ಡಿಪಿ ಪತ್ನಿ: ಪರೀಕ್ಷೆ ಅಕ್ರಮದಲ್ಲಿ ಸದ್ಯ ಅಶೋಕ ನಗರ ಠಾಣೆ ಪೊಲೀಸರ ಸುಪರ್ದಿಯಲ್ಲಿರುವ ಆರ್.ಡಿ.ಪಾಟೀಲ್ ಸ್ಥಿತಿ ಕಂಡು ಆತನ ಪತ್ನಿ ಕಣ್ಣೀರು ಹಾಕಿದ್ದಾರೆ. ಪಾಟೀಲ್ ಪತ್ನಿ ಇಂದು ಮಾವ ವಕೀಲ ಶಿವಕುಮಾರ ಹಾಗೂ ಇತರರೊಡನೆ ಠಾಣೆಗೆ ಆಗಮಿಸಿ ಪತಿಯನ್ನು ಭೇಟಿಯಾದರು. ಈ ವೇಳೆ, ಠಾಣೆಯಿಂದ ಹೊರಬಂದು ಕಣ್ಣೀರು ಸುರಿಸುತ್ತಾ ಕಾರಿನಲ್ಲಿ ಕುಳಿತು ತೆರಳಿದರು.
ಇದನ್ನೂ ಓದಿ: ಎಫ್‌ಡಿಎ ಪರೀಕ್ಷೆ ಅಕ್ರಮ ಆರೋಪ ಪ್ರಕರಣದ ಕಿಂಗ್ ಪಿನ್ ಪಾಟೀಲ್ ಅರೆಸ್ಟ್.. ಠಾಣೆಗೆ ಕರೆತಂದ ಕಲಬುರಗಿ ಪೊಲೀಸರು