ಕಲಬುರಗಿ: ಆಕೆ ಬಡ ಕುಟುಂಬದ ಮಹಿಳೆ. ಜೀವನೋಪಾಯಕ್ಕಾಗಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ತನ್ನಲ್ಲಿರುವ ಸ್ವಲ್ಪ ಪ್ರಮಾಣದ ಜಮೀನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಹಣ ಬೇಕೆಂದು ಪರದಾಡುತ್ತಿದ್ದಾಗ ಕಿರಾತಕನೊಬ್ಬ ಲೋನ್ ಕೊಡಿಸುವುದಾಗಿ ನಂಬಿಸಿ ಇರುವ ಜಮೀನನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಘಟನೆಯಿಂದ ಬೇಸತ್ತ ಮಹಿಳೆ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಮೋಸ ಹೋದ ಮಹಿಳೆಯ ಹೆಸರು ಶಿವಲೀಲಾ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಾಚೂರ ಗ್ರಾಮದ ನಿವಾಸಿ. ಇದೇ ಗ್ರಾಮದ ಸಿದ್ದಲಿಂಗಪ್ಪ, ಅರ್ಜುನ್ ಹಾಗೂ ಶ್ರೀಮಂತ ತೋಟ್ಟನಳ್ಳಿ ಎಂಬವರು ಸೇರಿ ಫೈನಾನ್ಸ್ನಲ್ಲಿ ಲೋನ್ ಮಾಡಿಸಿಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
"ಸಿದ್ದಲಿಂಗಪ್ಪ, ಅರ್ಜುನ್ ಶ್ರೀಮಂತ ಸೇರಿ 17 ಸಾವಿರ ರೂ ಹಣ ಕೊಟ್ಟು 25 ಸಾವಿರ ರೂ. ಎಂದು ಡೈರಿಯಲ್ಲಿ ಬರೆದುಕೊಟ್ಟಿದ್ದಾರೆ. ಕೆಲ ದಿನಗಳ ಕಾಲ ಹಣ ಕಟ್ಟುತ್ತಿದ್ದೆ. ಆದರೆ ಸಿದ್ದಲಿಂಗಪ್ಪ ಹಾಗೂ ಅವರ ತಾಯಿ, ಮಕ್ಕಳು ಬಂದು ಹಣ ಸರಿಯಾಗಿ ಕಟ್ಟುತ್ತಿಲ್ಲ ಎಂದು ತಗಾದೆ ತೆಗೆದು ಮನೆಯಲ್ಲಿದ್ದ ಫ್ರಿಜ್ ಎತ್ತಿಕೊಂಡು ಹೋದರು. ತಹಶೀಲ್ದಾರ್ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ಲೋನ್ ಕೊಡಿಸುವ ವೇಳೆ ಐದು ಲಕ್ಷ ರೂಪಾಯಿಗೆ ಜಮೀನು ಮಾರುತ್ತಿದ್ದೇನೆಂದು ಬರೆಸಿಕೊಂಡಿದ್ದಾರೆ. ಈಗ ನೋಟಿಸ್ ನೀಡಿದ್ದಾರೆ. ಈ ನೋಟಿಸ್ ಅನ್ನು ನಾನು ವಕೀಲರಿಗೆ ತೋರಿಸಿದೆ. ಅವರು ನೀನು ಯಾಕೆ ಸಹಿ ಮಾಡಿದೆ ಎಂದು ಪ್ರಶ್ನಿಸಿದರು. ಆಗ ನಾನು ಅವರಿಗೆ ನನಗೆ ಇವೆಲ್ಲಾ ಗೊತ್ತಾಗಲ್ಲ, ಓದಲು ಬರೆಯಲು ಬರಲ್ಲ ಎಂದೆ. ಅಲ್ಲದೇ ಮೋಸದಲ್ಲಿ ನನ್ನ ಜಮೀನು ಬರೆಸಿಕೊಂಡಿರುವುದು ನನಗೆ ಗೊತ್ತಾಗಿಲ್ಲ. ಈಗ ಅದನ್ನು ಮರಳಿ ಕೇಳಿದರೆ 2 ಲಕ್ಷ ರೂಪಾಯಿ ನೀಡುವಂತೆ ಹೇಳುತ್ತಿದ್ದಾನೆ" ನೊಂದ ಮಹಿಳೆ ವಿವರಿಸಿದರು. ಸಂತ್ರಸ್ತ ಮಹಿಳೆ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲೂ ನ್ಯಾಯ ಸಿಗಲಿಲ್ಲ ಎಂದು ನೊಂದು ಇದೀಗ ಮಾಧ್ಯಮಗಳ ಮುಂದೆ ಬಂದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಗದಗ: ಗೂಂಡಾ ಕಾಯ್ದೆಯಡಿ ಬಂಧಿಸಲು ಹೋದ ಪೊಲೀಸರಿಗೇ ಜೀವ ಬೆದರಿಕೆ ಹಾಕಿದ ಕಿರಾತಕರು